ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಂದಮೇಲಂತೂ ಸಿನಿಮಾಗಳು ಭಾಷೆಯ ಗಡಿದಾಟಿವೆ. ಬೇರೆ ಬೇರೆ ಭಾಷೆಯ ಸಿನಿಮಾಗಳು ಎಲ್ಲಾ ಕಡೆ ಬಿಡುಗಡೆಯಾಗುತ್ತಿವೆ. ಈಗಾಗಲೇ ಹಿಂದಿ, ತಮಿಳು, ತೆಲುಗು ಡಬ್ ಆಗಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿವೆ. ಅದರಂತೆ ಈಗ ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಜುಲೈ 7ರಂದು ರಾಯರು ಬಂದರು ಮಾವನ ಮನೆಗೆ ಚಿತ್ರ ಕನ್ನಡ ಪ್ರೇಕ್ಷಕರ ಎದುರು ಬರಲಿದೆ. ಈ ಸಿನಿಮಾವನ್ನು ಜಾಕ್ ಮಂಜು ತಮ್ಮದೇ ಶಾಲಿನಿ ಆರ್ಟ್ ಬ್ಯಾನರ್ ನಡಿ ಬಿಡುಗಡೆ ಮಾಡುತ್ತಿದ್ದಾರೆ. ಅದರ ಮೊದಲ ಭಾಗವಾಗಿ ಇಂದು ಖಾಸಗಿ ಹೋಟೆಲ್ ನಲ್ಲಿ ಟ್ರೇಲರ್ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ನಿರ್ಮಾಪಕರು ಹಾಗೂ ವಿತರಕರು ಆಗಿರುವ ಜಾಕ್ ಮಂಜು ಮಾತನಾಡಿ, ನಾವು ಕನ್ನಡ ಸಿನಿಮಾಗಳನ್ನು ಮಾಡಿ ಅನ್ಯ ಭಾಷೆಗೆ ಡಬ್ ಮಾಡಿ ಅಲ್ಲಿ ಹೋಗಿ ರಿಲೀಸ್ ಮಾಡಿ ಬಹಳಷ್ಟು ಸಿನಿಮಾಗಳು ಗೆದ್ದು ಇವತ್ತು ಕನ್ನಡ ಭಾಷೆ ಹಾಗೂ ಕನ್ನಡ ಸಿನಿಮಾಗಳಿಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ಗೌರವ ತಂದುಕೊಟ್ಟಿವೆ. ಕಳೆದ ನಾಲ್ಕೈದು ವರ್ಷಗಳಿಂದ ಇದು ನಡೆಯುತ್ತಿದೆ. ಅದೇ ರೀತಿಯಾಗಿ ಒಂದು ಗುಜರಾತಿ ಸಿನಿಮಾ ಮಾಡಿ. ಆ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಿ ಇಲ್ಲಿ ರಿಲೀಸ್ ಮಾಡಲು ಬಂದಿದ್ದಾರೆ. ಅವರಿಗೂ ಅದೇ ರೀತಿ ಸ್ವಾಗತವನ್ನು ಕನ್ನಡಿಗರು ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಎಲ್ಲಾ ಒಳ್ಳೆದಾಗುತ್ತದೆ ಎಂಬ ನಂಬಿಕೆ ಇದೆ. ಈ ಒಂದು ಸಿನಿಮಾ ಸಕ್ಸಸ್ ಆಗುವುದರಿಂದ ಬಹಳಷ್ಟು ಜನ ಇದೇ ರೀತಿ ಡಬ್ ಮಾಡಿ ನಮ್ಮ ಕರ್ನಾಟಕದಲ್ಲಿ ರಿಲೀಸ್ ಮಾಡುತ್ತಾರೆ. ಕನ್ನಡಿಗರಿಗೆ ನೋಡುವ ಅವಕಾಶ ಸಿಗುತ್ತದೆ. ನಿಮಗೆಲ್ಲಾ ಗೊತ್ತಿದೆ. ಥಿಯೇಟರ್ ಗಳು ಮುಚ್ಚುವಂತಹ ಪರಿಸ್ಥಿತಿ ಬಂದಿದೆ. ಥಿಯೇಟರ್ ಮುಚ್ಚಿದ ನಂತರ ಯಾವ ಸಿನಿಮಾ ನೋಡಲು ಥಿಯೇಟರ್ ಇರಲ್ಲ. ಯಾವ ಹೀರೋಗೂ ಕೆಲಸ ಇರಲ್ಲ ಎಂದರು.
ಕನ್ನಡದಲ್ಲಿ ಮಾತು ಆರಂಭಿಸಿದ ನಾಯಕ ತುಷಾರ್ ಸಾಧು, ಇದೊಂದು ಅದ್ಭುತ ಅನುಭವ. ನಾನು ಬೆಂಗಳೂರಿಗೆ ಎರಡನೇ ಬಾರಿ ಬಂದಿದ್ದೇನೆ. ಜಾಕ್ ಮಂಜು ಸರ್ ಇಲ್ಲದೇ ಈ ಕೆಲಸ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಒಂದೇ ಗುಣಗಳಿರುವ ಜೋಡಿ ಪ್ರೀತಿಸಿ ಮದುವೆಯಾಗುತ್ತಾರೆ. ಮದುವೆಯಾದ ಹುಡುಗಿ ಗಂಡನ ಮನೆಗೆ ಬರುವುದು ಕಾಮನ್. ಕೆಲವೊಮ್ಮೆ ಮನೆ ಅಳಿಯನಾಗಿ ಹೋಗುವುದು ಅಪರೂಪ. ಇಲ್ಲಿ ಮನೆ ಅಳಿಯನಾಗಿ ಹೋಗುವ ನಾಯಕನ ವ್ಯಥೆ ಕಥೆ ಸುತ್ತಾ ಇಡೀ ಸಿನಿಮಾ ಸಾಗುತ್ತದೆ. ರತ್ನಪುರ, ಜಿತಿ ಲೇ ಜಿಂದಗಿ ಎಂಬ ಎರಡು ಹಿಟ್ ಚಿತ್ರ ಕೊಟ್ಟಿರುವ ವಿಫುಲ್ ಶರ್ಮಾ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದ್ದು, ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ. ಸಾಧುತುರ್ಷಾ, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಶಾಂತ್ ಬರೋಟ್, ಜಯ್ ಪಾಂಡ್ಯ ಮತ್ತು ಜೈಮಿನಿ ತ್ರಿವೇದಿ ಇತರರು ತಾರಾಬಳಗದಲ್ಲಿದ್ದಾರೆ. ಕೌಟುಂಬಿಕ ಕಥಾಹಂದರದ ರಾಯರು ಬಂದರು ಮಾವನ ಮನೆಗೆ ಸಿನಿಮಾ ಮುಂದಿಮ ತಿಂಗಳ 7ರಂದು ಥಿಯೇಟರ್ ಗೆ ಎಂಟ್ರಿ ಕೊಡಲಿದೆ.
Be the first to comment