ಸಾಹಸ ದೃಶ್ಯದ ಚಿತ್ರೀಕರಣ ವೇಳೆ ನಿಧನ ಹೊಂದಿದ ಉದಯ್, ಅನಿಲ್ ಸಾವಿಗೆ ಅವರೇ ಕಾರಣ ಎಂದು ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರು ವಾದ ಮಂಡಿಸಿದ್ದಾರೆ.
ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಸಿನಿಮಾದ ಸಾಹಸ ಸನ್ನಿವೇಶದಲ್ಲಿ ಉದಯೋನ್ಮುಖ ಖಳ ನಟರಾದ ಉದಯ್ ಮತ್ತು ಅನಿಲ್ ನೀರಿಗೆ ಬಿದ್ದು ದುರಂತ ಅಂತ್ಯ ಕಂಡಿದ್ದರು. ಇಬ್ಬರ ಸಾವಿಗೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ರವಿವರ್ಮ ಸೇರಿದಂತೆ ಹಲವರು ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಈಗ ಸಾವಿನ ವಿಚಾರಣೆ ಬೆಂಗಳೂರು ನಗರದ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಬಂದಿದ್ದು, ನ್ಯಾಯಧೀಶರಿಗೆ ರವಿವರ್ಮ ಪರ ವಕೀಲರು ಹಲವು ವಿಷಯಗಳನ್ನು ಮಂಡಿಸಿದ್ದಾರೆ.
ರವಿವರ್ಮ ಪರ ವಕೀಲರಾದ ಸಿ.ಎಚ್. ಹನುಮಂತರಾಯ ಅವರು ವಾದ ಮಂಡಿಸಿದ್ದು, ನಟರ ಸಾವಿಗೆ ಅವರೇ ಕಾರಣ. ತಮ್ಮ ದೇಹದ ಸಿಕ್ಸ್ ಪ್ಯಾಕ್ ತೋರಿಸಲು ಹೋಗಿ ಈ ರೀತಿ ಮಾಡಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ಅಭಿಮಾನಿಗಳು ನೋಡಲಿ ಎನ್ನುವುದಕ್ಕಾಗಿ ಅವರು ಸೇಫ್ಟಿ ಜಾಕೆಟ್ ಧರಿಸಲು ಒಪ್ಪಲಿಲ್ಲ. ಹಾಗೆಯೇ ತಮಗೆ ಈಜು ಬರುತ್ತದೆ ಎಂದೂ ಹೇಳಿದ್ದರು. ಅದೊಂದು ಆಕಸ್ಮಿಕ ಸಾವು ಎಂದು ವಕೀಲರು ವಾದ ಮಂಡಿಸಿದ್ದಾರೆ.
ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಮೇಲೆ ತಿಳಿಸಿದ ಎಲ್ಲವನ್ನೂ ಉಲ್ಲೇಖಿಸಲಾಗಿದೆ. ಆ ಇಬ್ಬರು ನಟರ ಒಪ್ಪಿಗೆ ಪಡೆದುಕೊಂಡೇ ಹೆಲಿಕಾಫ್ಟರ್ ನಿಂದ ಜಲಾಶಯದ ಹಿನ್ನೀರಿಗೆ ಧುಮುಕುವ ಸಾಹಸ ಮಾಡಿಸಲಾಯಿತು. ಹಾಗಾಗಿ ಇದನ್ನು ಆಕಸ್ಮಿಕ ಘಟನೆ ಎಂದು ಭಾವಿಸಬೇಕು ಎಂದು ವಕೀಲರು ಮನವಿ ಮಾಡಿಕೊಂಡರು.
ವಾದ ಆಲಿಸಿದ ನ್ಯಾಯಾಮೂರ್ತಿಗಳಾದ ಎಸ್. ಶ್ರೀಧರ್ ಅವರು ಹೆಚ್ಚಿನ ವಾದ ಮಂಡನೆಗೆ ಮೇ 30ಕ್ಕೆ ವಿಚಾರಣೆ ನಿಗದಿಪಡಿಸಿದ್ದಾರೆ.
2016ರ ನವೆಂಬರ್ 7 ರಂದು ನಡೆದ ಘಟನೆಯಲ್ಲಿ ಹೆಲಿಕಾಪ್ಟರ್ ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಧುಮುಕಿದ್ದ ಅನಿಲ್, ಉದಯ್ ಶವವಾಗಿ ಪತ್ತೆಯಾಗಿದ್ದರು. ಈ ಇಬ್ಬರೊಂದಿಗೆ ಜಿಗಿದಿದ್ದ ದುನಿಯಾ ವಿಜಯ್ ಅವರನ್ನು ರಕ್ಷಣೆ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ತಾವರೆಕೆರೆ ಪೊಲೀಸರು ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
——-
Be the first to comment