ರೋಸಿ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆದಿತ್ತು. ಇದೀಗ ಸಿನಿಮಾದ ಟೈಟಲ್ ವಿರುದ್ಧ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.
ನಿರ್ಮಾಪಕ ರಮೇಶ್ ರೆಡ್ಡಿ ಲೂಸ್ ಮಾದ ಅವರ ಹೊಸ ಸಿನಿಮಾದ ಹೆಸರಿನ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ರೋಸಿ ಸಿನಿಮಾ ಟೈಟಲ್ ತಮ್ಮ ಬಳಿ ಇದೆ ಎಂದಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ನಾತಿಚರಾಮಿ, ಇತ್ತೀಚೆಗಿನ ಗಾಳಿಪಟ 2, ಪಡ್ಡೆಹುಲಿ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಮೇಶ್ ರೆಡ್ಡಿ,ಅರ್ಜುನ್ ಜನ್ಯ ನಿರ್ದೇಶಿಸುತ್ತಿರುವ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಆ ಸಿನಿಮಾಕ್ಕೆ ರೋಸಿ 45 ಎಂಬ ಹೆಸರನ್ನು ನೊಂದಣಿ ಮಾಡಿಸಿದ್ದಾರೆ. ಆದರೆ ಯೋಗಿಯ ಸಿನಿಮಾಕ್ಕೂ ರೋಸಿ ಎಂದೇ ಹೆಸರಿಟ್ಟಿರುವ ಕಾರಣ ರಮೇಶ್ ರೆಡ್ಡಿ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನೂ ಹೊರಡಿಸಿರುವ ರಮೇಶ್ ರೆಡ್ಡಿ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ ಶೀರ್ಷಿಕೆಯನ್ನು ನೊಂದಾಯಿಸಲಾಗಿತ್ತು. ಈಗ ಡಿ ವೈ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಸಿನಿಮಾಕ್ಕೂ ‘ರೋಸಿ’ ಎಂದು ಹೆಸರು ಇಡಲಾಗಿದೆ. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೊದಲು ಶೀರ್ಷಿಕೆ ನೊಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ಹೇಳಿದೆ. ಹಾಗಾಗಿ, ಸೂರಜ್ ಪ್ರೊಡಕ್ಷನ್ಸ್‌ಗೆ ‘ರೋಸಿ 45’ ಶೀರ್ಷಿಕೆ ಸೇರಿದೆ. ಇನ್ನು ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್‌ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ’ ಎಂದು ತಿಳಿಸಿದ್ದಾರೆ.
ಯೋಗಿ ಹಾಗೂ ತಂಡವು ತಾವು ಇಟ್ಟಿದ್ದ ರೋಸಿ ಹೆಸರನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅರ್ಜುನ್ ಜನ್ಯ ಅವರು ತಮ್ಮ ಸಿನಿಮಾಕ್ಕೆ ಈಗ ರೋಸಿ ಹೆಸರನ್ನು ಬಳಸಬಹುದಾಗಿದೆ.
ಅರ್ಜುನ್ ಜನ್ಯ ಮೊದಲ ಸಿನಿಮಾಕ್ಕೆ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ನಾಯಕರಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಶುರುವಾಗಬೇಕಿದೆ.
ಲೂಸ್ ಮಾದ ಯೋಗಿಯ 50ನೇ ಸಿನಿಮಾಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಡಾಲಿ ಧನಂಜಯ್ ನಟಿಸಿದ್ದ ಹೆಡ್-ಬುಷ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಶೂನ್ಯ, ಲೂಸ್ ಮಾದರ 50ನೇ ಸಿನಿಮಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಗ್ಯಾಂಗ್ಸ್ಟರ್ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ.
—–
Be the first to comment