ರಾಜ್ಯಾದ್ಯಂತ ಇಂದು ಒಟ್ಟು ನಾಲ್ಕು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ.
ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಮೂಲಕ ಕೆ.ಎಂ. ಶಶಿಧರ್ ನಿರ್ಮಿಸಿರುವ ಆಯಕ್ಷನ್, ಥ್ರಿಲ್ಲರ್ ಚಿತ್ರ ‘ವೀರಂ’ ಇಂದು ಬಿಡುಗಡೆ ಆಗಿದೆ. ಪ್ರಜ್ವಲ್ ದೇವರಾಜ್ ನಾಯಕ ಆಗಿ ನಟಿಸಿದ್ದಾರೆ.
ಚಿತ್ರಕ್ಕೆ ಖದರ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಒಕುಟುಂಬಕ್ಕೆ ತೊಂದರೆ ಬಂದಾಗ ಎಲ್ಲರೂ ಹೇಗೆ ಜೊತೆಗೆ ನಿಲ್ಲುತ್ತಾರೆ ಎನ್ನುವುದು ಚಿತ್ರದ ಕಥೆ ಆಗಿದೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ರಚಿತಾರಾಮ್, ಶ್ರುತಿ, ಶ್ರೀನಗರ ಕಿಟ್ಟಿ ನಟಿಸಿದ್ದಾರೆ.
ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಇದೆ., ಅನೂಪ್ ಸೀಳಿನ್ ಸಂಗೀತ, ಲವಿತ್ ಕ್ಯಾಮೆರಾವರ್ಕ್ ಚಿತ್ರಕ್ಕಿದೆ.
ಜನಪ್ರಿಯ ನಟ, ನಿರ್ದೇಶಕ ಹೇಮಂತ್ ಹೆಗಡೆ ನಿರ್ದೇಶನದ ‘ನಮ್ ನಾಣಿ ಮದುವೆ ಪ್ರಸಂಗ’ ಇಂದು ಬೆಳ್ಳಿತೆರೆಗೆ ಬಂದಿದೆ. ಉತ್ತರಕನ್ನಡದ ರೈತಾಪಿ ಹುಡುಗನೊಬ್ಬನ ಕಷ್ಟ-ಸುಖಗಳ ಕುರಿತು ಚಿತ್ರದಲ್ಲಿ ಕಥೆ ಇದೆ.
ಇಲ್ಲಿ ರಾಜೇಶ್ ನಟರಂಗ, ಸುಚೇಂದ್ರ ಪ್ರಸಾದ್, ಕೆ.ಎಂ.ಚೈತನ್ಯ, ಸಾಕ್ಷಿ ಮೇಘನ, ರಕ್ಷಿಕಾ ಮುಂತಾದವರು ನಟಿಸಿದ್ದಾರೆ.
ಉತ್ತರ ಕನ್ನಡದ ಭಾಷೆ, ಸಂಸ್ಕೃತಿಯನ್ನು ಹೊಂದಿರುವ ಚಿತ್ರ ಇದಾಗಿದೆ. ಅಲ್ಲಿನ ವಿವಿಧ ಸಮುದಾಯಗಳ ಜೀವನಶೈಲಿಯನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಐದು ಬೇರೆ ಕಥೆಗಳನ್ನು ಇಟ್ಟುಕೊಂಡು ಮಾಡಿರುವ ‘ಆಂಥಾಲಜಿ’ ಸಿನಿಮಾ ‘ಪೆಂಟಗನ್’ ಇಂದು ತೆರೆ ಕಂಡಿದೆ. ಚಿತ್ರವನ್ನು ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದಾರೆ.
ಚಿತ್ರದಲ್ಲಿ 5 ಕಥೆಗಳಿದ್ದು, ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ನಿರ್ದೇಶನ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ, ಕಿರಣ್ ಹಂಪಾಪುರ, ಅಭಿಲಾಶ್ ಕಲ್ಲತ್ತಿ, ಗುರುಪ್ರಸಾದ್ ಅವರ ಛಾಯಾಗ್ರಹಣ ಇದೆ.
ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ರವಿಶಂಕರ್, ಕಿಶೋರ್, ಪೃಥ್ವಿ ಅಂಬಾರ್, ತನಿಷಾ ಕುಪ್ಪಂಡ ಮೊದಲಾದವರು ನಟಿಸಿದ್ದಾರೆ.
ನಟ ಮತ್ತು ನಿರ್ದೇಶಕ ತೇಜ್ ಅಭಿನಯದ ‘ರಾಮಾಚಾರಿ 2.0’ ಚಿತ್ರ ಇಂದು ತೆರೆಗೆ ಬಂದಿದೆ. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ನಟಿ ಚಂದನಾ ಹಾಗೂ ‘ನನ್ನರಸಿ ರಾಧೆ’ ಧಾರಾವಾಹಿ ನಟಿ ಕೌಸ್ತುಭಮಣಿ ಚಿತ್ರಕ್ಕೆ ನಾಯಕಿಯರಾಗಿದ್ದಾರೆ. ತೇಜ್ ನಿರ್ದೇಶನ ಮತ್ತು ನಿರ್ಮಾಣದ ಚಿತ್ರ ಇದಾಗಿದೆ.
ನಾಲ್ಕು ಚಿತ್ರಗಳ ಪೈಕಿ ಯಾವ ಚಿತ್ರವನ್ನು ಪ್ರೇಕ್ಷಕರು ಕೈ ಹಿಡಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.
—–
Be the first to comment