ಸಂಗೀತ ನಿರ್ದೇಶಕ ವಿ.ಮನೋಹರ್ 23 ವರ್ಷಗಳ ನಂತರ ‘ದರ್ಬಾರ್’ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ.
ಸತೀಶ್ ಕಥೆ ಬರೆದು ನಿರ್ಮಾಣದ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
‘ನಾನು ‘ಇಂದ್ರಧನುಷ್’ ಚಿತ್ರ ಮಾಡಿದ ನಂತರ ಧಾರಾವಾಹಿ, ಸಂಗೀತ ನಿರ್ದೇಶನ ಎಂದೆಲ್ಲಾ ತೊಡಗಿಸಿಕೊಂಡೆ. ಸಿನಿಮಾ ಶುರು ಮಾಡಲು ಬಂದವರು ನಂತರ ಮುಂದುವರಿಯುತ್ತಲೇ ಇರಲಿಲ್ಲ. ಈ ಮೊದಲು ನಾನು ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದೆ. ಇದೇ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಸತೀಶ್ ಅವರು ನನ್ನ ಸ್ನೇಹಿತರು. ಇತ್ತೀಚೆಗೆ ಸಿಕ್ಕಾಗ ಅವರು ಈ ಕಥೆ ಹೇಳಿದರು. ಇಂದಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಸಬ್ಜೆಕ್ಟ್ ಇದು’ ಎಂದು ಮನೋಹರ್ ಹೇಳಿದ್ದಾರೆ.
ನಾಯಕಿ ಜಾಹ್ನವಿ ಅವರಿಗೆ ಇದು ಮೊದಲ ಚಿತ್ರ. ನಾಯಕಿ ಮನೋವಿಜ್ಞಾನ ವಿದ್ಯಾರ್ಥಿನಿ. ರಜಾಕಾಲದಲ್ಲಿ ಊರಿಗೆ ಬಂದಾಗ ನಾಯಕನ ಪರಿಚಯವಾಗಿ ಅವನಿಗೆ ಪೂರಕವಾಗಿ ಕೆಲಸ ಮಾಡುತ್ತಾಳೆ. ಮುಂದೇನು ಎನ್ನುವುದಕ್ಕೆ ಚಿತ್ರ ನೋಡಬೇಕಿದೆ.
ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮೀದೇವಿ, ಅಶೋಕ್, ಸಾಧು ಕೋಕಿಲ, ನವೀನ್ ಡಿ. ಪಡೀಲ್, ಹುಲಿ ಕಾರ್ತಿಕ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ 3 ಹಾಡುಗಳಿವೆ. ಶೀರ್ಷಿಕೆ ಗೀತೆಯನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ. ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.
ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಬಿ.ಎನ್. ಶಿಲ್ಪಾ ಅವರು ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು ಚಿತ್ರದಲ್ಲಿವೆ. ಮಂಡ್ಯ, ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ ಚಿತ್ರೀಕರಣ ನಡೆದಿದೆ. ಏಪ್ರಿಲ್‌ನಲ್ಲಿ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.
——
Be the first to comment