ಕೆಡಿ ಚಿತ್ರದಲ್ಲಿ ನಟಿ ಶಿಲ್ಪಾ ಶೆಟ್ಟಿ ಅಭಿನಯಿಸುತ್ತಿದ್ದು, ಅವರು ಮಾಡಿರುವ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ.
ಚಿತ್ರತಂಡ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ‘ಸತ್ಯವತಿ’ ಎಂಬ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಹಳೇ ಕಾಲದ ಹೇರ್ಸ್ಟೈಲ್, ಕನ್ನಡಕ ಹಾಗೂ ಕೈಯಲ್ಲೊಂದು ಬ್ಯಾಗ್ ಹಿಡಿದು ನಡೆದು ವಿಂಟೇಜ್ ಕಾರೊಂದರ ಮುಂದೆ ಶಿಲ್ಪಾ ಶೆಟ್ಟಿ ನಡೆದು ಬರುತ್ತಿರುವ ಪೋಸ್ಟರ್ ಬಿಡುಗಡೆ ಆಗಿದೆ.
ಈ ಪೋಸ್ಟರ್ ನ್ನು ಶಿಲ್ಪಾ ಶೆಟ್ಟಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಪೋಸ್ಟರ್ ಹಂಚಿಕೊಳ್ಳುವಾಗ ಶಿಲ್ಪಾ ಶೆಟ್ಟಿ ತೆಲುಗಿನಲ್ಲಿ ‘ಯುಗಾದಿ ಶುಭಾಕಾಂಕ್ಷಲು’ ಎಂದು ಶುಭ ಕೋರಿದ್ದಾರೆ. ಇದು ಕನ್ನಡ ಚಿತ್ರಪ್ರೇಮಿಗಳಲ್ಲಿ ಕೋಪಕ್ಕೆ ಕಾರಣವಾಗಿದೆ.
ನೆಟ್ಟಿಗರು ಕನ್ನಡ ಚಿತ್ರದ ಪೋಸ್ಟರ್ಗೂ ತೆಲುಗು ಭಾಷೆಗೂ ಯಾವ ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಮಂಗಳೂರಿನವರಾದ ಶಿಲ್ಪಾ ಶೆಟ್ಟಿ ಕನ್ನಡ ಕಡೆಗಣನೆ ಮಾಡಿರುವುದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.
ಶಿಲ್ಪಾ ಶೆಟ್ಟಿ ರವಿಚಂದ್ರನ್ ಜತೆ 1998ರಲ್ಲಿ ಪ್ರೀತ್ಸೋದ್ ತಪ್ಪಾ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಶಿಲ್ಪಾ ಶೆಟ್ಟಿ ನಟಿಸುತ್ತಿರುವ ನಾಲ್ಕನೇ ಕನ್ನಡ ಸಿನಿಮಾ ಇದಾಗಿದೆ. ಪ್ರೀತ್ಸೋದ್ ತಪ್ಪಾ ಬಳಿಕ ಒಂದಾಗೋಣ ಬಾ ಹಾಗೂ 2005ರಲ್ಲಿ ಉಪೇಂದ್ರ ನಟನೆಯ ಆಟೋ ಶಂಕರ್ ಚಿತ್ರದಲ್ಲಿ ಸಹ ನಟಿಸಿದ್ದರು.
18 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಪ್ರೇಮ್ ನಿರ್ದೇಶನವಿದೆ. ಕೆವಿಎನ್ ಪ್ರೊಡಕ್ಷನ್ಸ್ ಚಿತ್ರ ನಿರ್ಮಾಣ ಮಾಡುತ್ತಿದೆ.
——–
Be the first to comment