Rakshith shetty: ಮಿಥುನ್ ರೈ ಹೇಳಿಕೆಗೆ ರಕ್ಷಿತ್ ಶೆಟ್ಟಿ ತಿರುಗೇಟು

ಕೃಷ್ಣ ಮಠಕ್ಕೆ ಭೂಮಿ ಕೊಟ್ಟವರು ಮುಸ್ಲಿಂ ರಾಜರು ಎಂದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಗೆ ನಟ ರಕ್ಷಿತ್ ಶೆಟ್ಟಿ ತಿರುಗೇಟು ನೀಡಿದ್ದಾರೆ.

ರಕ್ಷಿತ್‌ ಶೆಟ್ಟಿ ಟ್ವೀಟ್ ಮಾಡಿ “ದೇವಾಲಯದ ಪಟ್ಟಣವಾದ ಉಡುಪಿ ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ನಿಮಗೆ ಗೊತ್ತಿಲ್ಲ ಅಂದಮೇಲೆ ಸಾರ್ವಜನಿಕ ವೇದಿಕೆಯಲ್ಲಿ ಅಸಂಬದ್ಧವಾಗಿ ಮಾತನಾಡುವುದೇಕೆ ?” ಎಂದು ಪ್ರಶ್ನಿಸಿದ್ದಾರೆ.

ಮೂಡಬಿದಿರೆಯಲ್ಲಿ ನಡೆದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಮಿಥುನ್‌ ರೈ, ಉಡುಪಿ ಮಠಕ್ಕೆ ಮುಸ್ಲಿಂ ರಾಜರು ಜಾಗ ನೀಡಿದ್ದಾರೆ. ಸೌಹಾರ್ದತೆಯನ್ನು ಹೊಂದಿರುವ ಜಿಲ್ಲೆ ದಕ್ಷಿಣ ಕನ್ನಡ. ಬಪ್ಪನಾಡು ದುರ್ಗಾಪರಮೇಶ್ವರಿ ದೇವರು ಒಲಿದಿದ್ದು ಬಪ್ಪ ಬ್ಯಾರಿಗೆ. ತುಳುನಾಡಿನಲ್ಲಿ ಪವಾಡ ದೈವ ಕೊರಗಜ್ಜ ಕಟ್ಟೆಯೊಂದರಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯಿಂದ ಪೂಜೆ ನಡೆಯುತ್ತೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿದೆ.

ಈ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ತಿರಗೇಟು ನೀಡಿದ್ದಾರೆ. ಮುಸಲ್ಮಾನ ರಾಜರು ಯಾವುದೇ ಜಾಗವನ್ನು ಕೃಷ್ಣಮಠಕ್ಕಾಗಲಿ ಅನಂತೇಶ್ವರಕ್ಕಾಗಲಿ ಕೊಟ್ಟಿಲ್ಲ. ಅನಂತೇಶ್ವರ ದೇಗುಲಕ್ಕೆ ರಾಮಭೋಜನು ಜಾಗ ನೀಡಿದ ಬಗ್ಗೆ ಉಲ್ಲೇಖ ಇದೆ. ಮುಂದೆ ಆ ಜಾಗ ಕೃಷ್ಣ ಮಠಕ್ಕೆ ಬಳಕೆಯಾಗಿದೆ. ಅನಂತೇಶ್ವರ ದೇಗುಲ ನಂತರ ಕೃಷ್ಣ ಮಠ ಆಗಿ ನಿರ್ಮಾಣಗೊಂಡಿದೆ ಎಂದು ಹೇಳಿಕೆ ನೀಡಿದ್ದರು.

ಮಿಥುನ್ ರೈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!