ಕೆಂಪ, ಕರಿಯ ೨, ಗಣಪ ಹೀಗೆ ಮಾಸ್ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ನಟ ಸಂತೋಷ್ ಬಾಲರಾಜ್ ಬಹಳ ದಿನಗಳ ನಂತರ ಫ್ಯಾಮಿಲಿ ಎಂಟರ್ ಟೈನರ್ ಚಿತ್ರದ ಮೂಲಕ ಮರಳಿದ್ದಾರೆ. ೪೦ ವರ್ಷಗಳ ಹಿಂದೆ ರಾಜಮನೆತನವೊಂದರಲ್ಲಿ ನಡೆದ ಕಳಂಕದಿಂದಾಗಿ ಆ ಇಡೀ ವಂಶವೇ ಬಲಿಯಾದ ದಂತಕಥೆಯೊಂದನ್ನು ನಿರ್ದೇಶಕ ಅಶೋಕ್ ಕಡಬ ಅವರು ‘ಸತ್ಯಂ’ ಹೆಸರಿನಲ್ಲಿ ತೆರೆಮೇಲೆ ತರುತ್ತಿದ್ದಾರೆ.
ಶ್ರೀಮಾತಾ ಕ್ರಿಯೇಶನ್ಸ್ ಮೂಲಕ ಮಹಂತೇಶ್ ವಿಕೆ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ರಾಜ್ ಕುಟುಂಬದ ಎಸ್.ಎ.ಗೋವಿಂದರಾಜು ಅವರು ಪೋಸ್ಟರ್ ಲಾಂಚ್ ಮಾಡಿದರು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾಮ ಹರೀಶ್, ಕುಶಾಲ್ ಚಂದ್ರಶೇಖರ್, ಟಿಪಿ. ಸಿದ್ದರಾಜು, ನಿರ್ದೇಶಕ ಜಡೇಶ್ ಹಂಪಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಮಹಂತೇಶ್ ಇದು ನನ್ನ ನಿರ್ಮಾಣದ ೨ನೇ ಚಿತ್ರ. ಒಬ್ಬ ಜಮೀನ್ದಾರರ ಮನೆಯಲ್ಲಿ ನಡೆಯುವ ಕಥೆ,ನಾಉಕಿಯಾಗಿ ರಂಜನಿ ರಾಘವನ್, ಅಲ್ಲದೆ ಹಿರಿಯನಟ ಸುಮನ್, ಅವಿನಾಶ್, ಸಯ್ಯಾಜಿ ಶಿಂಧೆ, ವಿನಯಾ ಪ್ರಸಾದ್ ಹೀಗೆ ಅತ್ಯುತ್ತಮ ಕಲಾವಿದರೇ ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಒಬ್ಬ ಪ್ರೇಕ್ಷಕನಾಗಿ ಚಿತ್ರ ಚೆನ್ನಾಗಿ ಬಂದಿದೆ ಅಂತ ಹೇಳಬಲ್ಲೆ. ಉಳಿದ ಮಾಹಿತಿಗಳನ್ನು ಹಂತ ಹಂತವಾಗಿ ತಿಳಿಸುತ್ತೇವೆ. ಒಂದೊಳ್ಳೆ ಪ್ರಾಡಕ್ಟ್ ನ್ನು ಜನರಿಗೆ ತಲುಪಿಸುತ್ತಿದ್ದೇವೆ ಎಂದು ಹೇಳಿದರು.
ನಿರ್ದೇಶಕ ಅಶೋಕ್ ಕಡಬ ಮಾತನಾಡಿ ಸತ್ಯಕಥೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಒಂದು ಬಲವಾದ ಕಾರಣದಿಂದ ನಾಯಕಿಯ ಮನೆಗೆ ಬರುವ ನಾಯಕ ಏನೆಲ್ಲ ಎದುರಿಸಬೇಕಾಯಿತು ಎಂದು ಚಿತ್ರದಲ್ಲಿ ಹೇಳಿದ್ದೇವೆ. ಉಡುಪಿ, ಚಿಕ್ಕಮಗಳೂರು, ಮಂಗಳೂರು ಸುತ್ತಮುತ್ತ ೮೫ ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದ್ದು, ಡಿಐ ನಡೀತಿದೆ. ಶೇ.೪೦ರಷ್ಟು ರಾತ್ರಿಯಲ್ಲೇ ನಡೆಯುವ ಈ ಕಥೆಯಲ್ಲಿ ಭೂತಾರಾಧನೆ ಪ್ರಮುಖವಾಗಿ ಬರುತ್ತದೆ.
ಕಥೆಗೊಂದು ತಿರುವು ನೀಡುತ್ತದೆ ಎಂದರು.
ನಾಯಕ ಸಂತೋಷ್ ಮಾತನಾಡುತ್ತ ಇದು ನನ್ನ ೬ನೇ ಚಿತ್ರ. ಆಕ್ಷನ್ ಚಿತ್ರಗಳಲ್ಲೇ ಆ್ಯಕ್ಟ್ ಮಾಡಿದ ನಾನು ಫ್ರೆಂಡ್ ಷಿಪ್, ಫ್ಯಾಮಿಲಿ ಮೇಲೆ ನಡೆಯುವ ಕಥೆಯಲ್ಲಿ ಕಾಣಿಸಿಕೊಂಡಿದ್ದೇನೆ. ಸಾಕಷ್ಟು ಹಿರಿಯ ಕಲಾವಿದರ ಜೊತೆ ನಟಿಸುವ ಅವಕಾಶ ಇದರಲ್ಲಿ ಸಿಕ್ತು ಎಂದು ಹೇಳಿದರು. ನಾಯಕಿ ರಂಜನಿ ಮಾತನಾಡಿ ಇದು ನನ್ನ ೪ನೇ ಚಿತ್ರ. ಗೀತಾ ಎಂಬ ಹುಡುಗಿ, ನಾಯಕನ ಜೊತೆ ತುಂಬಾ ಸಲುಗೆಯಿಂದಿರುತ್ತಾಳೆ. ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನಿರ್ಮಾಪಕರು ಪ್ರತಿ ವಿಭಾಗದಲ್ಲಿ ಇನ್ ವಾಲ್ವ ಆಗಿದ್ದರು. ಕೋವಿಡ್ ನಿಂದ ೨ ವರ್ಷ ತಡವಾದರೂ ಈ ಹಂತಕ್ಕೆ ತಂದಿದ್ದಾರೆ ಎಂದು ಹೇಳಿದರು.
Be the first to comment