19.20.21’Movie : ಮಾ.3ಕ್ಕೆ ರಾಜ್ಯಾದ್ಯಂತ ಬಿಡುಗಡೆ ; ಸಿನಿಮಾದ ಹೊಸ ಪೋಸ್ಟರ್ ಮತ್ತು ಹಾಡು ಬಿಡುಗಡೆ

ಸಾಮಾಜಿಕ ಕಳಕಳಿಯ ಸಿನಿಮಾಗಳ ಮೂಲಕ ಮನರಂಜನೆ ಜೊತೆಗೆ ಜನರನ್ನು ಎಚ್ಚರಿಸುತ್ತಾ ಸದಾ ಗಮನ ಸೆಳೆಯುವ ಪ್ರತಿಭಾನ್ವಿತ ನಿರ್ದೇಶಕ ಮಂಸೋರೆ. ತಮ್ಮ ವಿಭಿನ್ನ ಶೈಲಿಯ ಸಿನಿಮಾ ನಿರೂಪಣೆಯಿಂದಲೇ ಪ್ರೇಕ್ಷಕರ ಗಮನ ಸೆಳೆಯುವ ಇವರ ಮತ್ತೊಂದು ಸಿನಿಮಾ ಕ್ರಾಂತಿ ‘19.20.21’ ಮಾರ್ಚ್ 3ರಂದು ತೆರೆ ಮೇಲೆ ಬರುತ್ತಿದೆ. ಈಗಾಗಲೇ ಸಿನಿಮಾದ ಝಲಕ್ ಗಳು, ಟ್ರೇಲರ್ ಎಲ್ಲರ ಮನಸ್ಸಿಗೂ ನಾಟಿದ್ದು, ಈ ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರ ವಲಯದಲ್ಲಿದೆ. ಇದರ ನಡುವೆ ಹೊಸದೊಂದು ಪೋಸ್ಟರ್ ರಿಲೀಸ್ ಮಾಡಿ ಕ್ಯೂರಿಯಾಸಿಟಿ ಮೂಡಿಸಿದೆ ಚಿತ್ರತಂಡ.

ಸೋಶಿಯಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ.ಬಿ.ವಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸರಪಳಿಯಿಂದ ಬಂಧಿತನಾಗಿರುವ ನಾಯಕ ಪೊಲೀಸ್ ಕಾವಲಿನ ನಡುವೆ ಪರೀಕ್ಷೆ ಬರೆಯುತ್ತಿರುವ ಈ ಪೋಸ್ಟರ್ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ನಯಾ ಪೋಸ್ಟರ್ ಮೂಲಕ ಸಿನಿಮಾದ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ ಚಿತ್ರತಂಡ.

ಪೋಸ್ಟರ್ ಜೊತೆಗೆ ಚಿತ್ರದ ಬಹು ನಿರೀಕ್ಷಿತ ಹಾಡು ಕೂಡ ಬಿಡುಗಡೆಯಾಗಿದೆ. ಬಿಂದು ಮಾಲಿನಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ‘ಹಾಡುಪಾಡು ಇವರ ಸಿಂಗಾರ, ನೋಡಾ ಬಾರ ಭುವಿಗೆ ಮಾಯ್ಕಾರ’ ಹಾಡು ಬಿಡುಗಡೆಯಾಗಿದೆ. ಕಿರಣ್ ಕಾವೇರಪ್ಪ ಹಾಗೂ ಉದಯ್ ರಾಜ್ ಸಾಹಿತ್ಯದಲ್ಲಿ ಅರಳಿರುವ ಈ ಹಾಡಿಗೆ ಎಂ.ಡಿ. ಪಲ್ಲವಿ, ಬಿಂದು ಮಾಲಿನಿ, ಉಮಾ ವೈಜಿ, ಮೋಹನ್ ಕುಮಾರ್, ಶೃಂಗ ಬಿ.ವಿ ದನಿಯಾಗಿದ್ದಾರೆ. ಹಾಡು ಬಿಡುಗಡೆಯಾಗಿ ಕೇಳುಗರ ಗಮನ ಸೆಳೆಯುತ್ತಿದೆ.

ಕರಾವಳಿಯಲ್ಲಿ ಎರಡು ದಶಕಗಳ ಕಾಲ ಸಮುದಾಯವೊಂದು ಅನುಭವಿಸಿದ ನೋವು ಹಾಗೂ ಅದರ ವಿರುದ್ಧ ನಡೆಸಿದ ಹೋರಾಟ ಈ ಸಿನಿಮಾವಾಗಲು ಸ್ಪೂರ್ತಿ. ನೈಜ ಘಟನೆ ಆಧರಿಸಿದ ಈ ಚಿತ್ರಕ್ಕಾಗಿ ನಿರ್ದೇಶಕ ಮಂಸೋರೆ ಹಾಗೂ ತಂಡ ಸಾಕಷ್ಟು ಅಧ್ಯಯನ ನಡೆಸಿ ಮಾಹಿತಿ ಕಲೆ ಹಾಕಿ ಸುಂದರವಾದ ಕಥಾಹಂದರವನ್ನು ಹೆಣೆದಿದ್ದಾರೆ. ನಿರ್ದೇಶಕರ ಪ್ರಯತ್ನಕ್ಕೆ ವೀರೇಂದ್ರ ಮಲ್ಲಣ್ಣ ಹಾಗೂ ಸಂತೋಷ್ ಸಾಥ್ ನೀಡುವುದರ ಜೊತೆಗೆ ಸ್ಕ್ರಿಪ್ಟ್ ಕೆಲಸದಲ್ಲಿ ಜೊತೆಯಾಗಿದ್ದಾರೆ.

ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಈ ಚಿತ್ರದ ಮತ್ತೊಂದು ಶಕ್ತಿ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!