ಬದುಕನ್ನು ಬಂದ ಹಾಗೆ ಸ್ವೀಕರಿಸಿ ಎನ್ನುವ ಸಂದೇಶ ನೀಡುವ ಹೊಂದಿಸಿ ಬರೆಯಿರಿ ಚಿತ್ರ ನೋಡುಗರಿಗೆ ಒಂದಷ್ಟು ಸಂದೇಶ ನೀಡುವ ಯತ್ನ ಮಾಡಿದೆ.
ನಾಲ್ವರು ಗೆಳೆಯರ ಗುಂಪಿನಲ್ಲಿ ಆರಂಭವಾಗುವ ಪ್ರೇಮಕಥೆ ಮುಂದೆ ಗೆಳತಿಯರ ಬಳಗದಲ್ಲೊಬ್ಬಳ ಆತ್ಮಹತ್ಯೆ ಕಡೆಗೆ ಸಾಗುತ್ತದೆ. ಯಾರು ಯಾರನ್ನು ಪ್ರೀತಿಸುತ್ತಾರೆ, ಮುಂದೆ ಏನಾಗುತ್ತದೆ ಇದನ್ನು ಪ್ರೇಕ್ಷಕ ತಾಳ್ಮೆಯಿಂದ ನೋಡಬೇಕಾಗುತ್ತದೆ.
ಅಂತರ್ಮುಖಿ ನಾಯಕ (ನವೀನ್ ಶಂಕರ್) ಮೇಷ್ಟ್ರಾಗಿ, ಬದುಕು ಬದಲಿಸಿಕೊಂಡು ಗರ್ಭಿಣಿ ವಿಧವೆಯನ್ನು (ಅರ್ಚನಾ ಜೋಯಿಸ್) ಮದುವೆಯಾಗುವುದು, ಅವಳೊಂದು ಹೆಣ್ಣು ಮಗು ಹೆತ್ತು ಸಾಯುವುದು. ಗೆಳೆಯರ ಪೈಕಿ ಇಬ್ಬರಿಗೆ ಸಹೋದ್ಯೋಗಿಗಳೇ ಇಷ್ಟವಾಗುವುದು. ಅವರಲ್ಲಿ ಒಬ್ಬನ ಗೆಳತಿ ಕೈಕೊಡುವುದು. ಮುಂದೆ ಒಂದಷ್ಟು ಹುಡುಕಾಟಗಳು ಇವೆಲ್ಲಾ ಆಗುವ ಹೊತ್ತಿಗೆ ಸಿನಿಮಾ ಮುಗಿಯುತ್ತದೆ.
ನವೀನ್ ಶಂಕರ್‌ನ ನಟನೆಗೆ ಫುಲ್ ಮಾರ್ಕ್ಸ್ ನೀಡಬಹುದು. ಅಂತರ್ಮುಖಿ ಯುವಕನ ಪಾತ್ರದಲ್ಲಿ ಅವರು ಉತ್ತಮ ಅಭಿನಯ ತೋರಿದ್ದಾರೆ. ಅರ್ಚನಾ ಜೋಯಿಸ್ ಅಭಿನಯ ಗಾಂಭೀರ್ಯದಿಂದ ಕೂಡಿದೆ. ಐಶಾನಿ ಶೆಟ್ಟಿ ‘ಗೊಂಬೆ’ ಆಗಿ ಕಾಣುತ್ತಾರೆ. ಸಂಯುಕ್ತಾ ಹೊರನಾಡು ನೆನಪಿನಲ್ಲುಳಿಯುತ್ತಾರೆ.
ಹಿನ್ನೆಲೆ ಸಂಗೀತ ಹಿತಮಿತವಾಗಿದೆ. ಛಾಯಾಗ್ರಹಣ ಚೆನ್ನಾಗಿದೆ. ಕುಪ್ಪಳಿಯ ಕವಿಶೈಲ, ಸಮುದ್ರ ತೀರ, ಮಲೆನಾಡು ತಾಣಗಳನ್ನು ಸುಂದರವಾಗಿ ಸೆರೆ ಹಿಡಿದು ತೋರಿಸಲಾಗಿದೆ.
ಬದುಕು, ಸಂಬಂಧಗಳ ಮೌಲ್ಯಗಳನ್ನು ಹೇಳಲು ಹೊರಟ ಸಿನಿಮಾ ‘ಹೊಂದಿಸಿ ಬರೆಯಿರಿ’. ಸಂದೇಶ ಸಾರುವ ಚಿತ್ರ ನೋಡಲು ಬಯಸುವವರಿಗೆ ಇದು ಇಷ್ಟ ಆಗಬಹುದು.
_____
Be the first to comment