ಶರಣ್ ನಟನೆಯ “ಛೂ ಮಂತರ್’ ಹಾರರ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಚಿತ್ರದ ಶೂಟಿಂಗ್ ಸದ್ದಿಲ್ಲದೇ ಮುಗಿದಿದೆ. ಚಿತ್ರದಲ್ಲಿ ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಪ್ರಮುಖ ಪಾತ್ರ ಮಾಡಿದ್ದಾರೆ.
ಛೂ ಮಂತರ್ನಲ್ಲಿ ಶರಣ್ ಒಬ್ಬ ಮಂತ್ರವಾದಿಯ ಪಾತ್ರದಲ್ಲಿ ನಟಿಸಿದ್ದಾರೆ. ಆಧುನಿಕ ನೋಟವನ್ನು ಹೊಂದಿರುವ ಹೊಸ-ಯುಗದ ಭೂತೋಚ್ಛಾಟಕನಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಚಿಕ್ಕಣ್ಣ ಮತ್ತು ಅದಿತಿ ಪ್ರಭುದೇವ ಇದ್ದಾರೆ.
ತರುಣ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಈ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಚಿತ್ರ ಆಗಿದೆ.
“ಕರ್ವ’ ಚಿತ್ರದ ನವನೀತ್, ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ.
ಬೆಂಗಳೂರು, ಮೈಸೂರು, ಉತ್ತರಖಂಡ ಹಾಗೂ ಲಂಡನ್ ನಲ್ಲಿ ಚಿತ್ರೀಕರಣ ನಡೆದಿದೆ. ಅನೂಪ್ ಕಟ್ಟುಕರನ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ.
ವೆಂಕಿ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್ ಹಾಗೂ ಮೋಹನ್ ಬಿ.ಕೆರೆ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.
____


Be the first to comment