ವಿಜಯಸೂರ್ಯ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಅಂತರಂಗ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದಲ್ಲಿ ಇತ್ತೀಚೆಗೆ ನೆರವೇರಿತು.
ಹಿರಿಯ ನಿರ್ದೇಶಕ ಎಸ್.ನಾರಾಯಣ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್, ನಟಿ ರೂಪಿಕಾ ಮತ್ತು ತೂತು ಮಡಿಕೆ ನಾಯಕ ಚಂದ್ರಕೀರ್ತಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.
ಎಲ್.ಎನ್.ಆರ್. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮೀನಾರಾಯಣ ರಾಜೇ ಅರಸ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ಅವನಲ್ಲಿ ಇವಳಿಲ್ಲಿ ಎಂಬ ಚಿತ್ರ ನಿರ್ಮಿಸಿದ್ದು, ಇವರಿಗಿದು ಎರಡನೇ ಚಿತ್ರ. ಅವರೇ ಚಿತ್ರದ ಮತ್ತೊಬ್ಬ ನಾಯಕನಾಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಮಾಸ್ತಿಗುಡಿ ದುರಂತದಲ್ಲಿ ಅಗಲಿದ ಉದಯ್ ಈ ಚಿತ್ರದ ನಾಯಕ ಹಾಗೂ ಖಳನಾಯಕ ಆಗಿದ್ದಾರೆ.
ಸ್ಪ್ಲಿಟ್ ಪರ್ಸನಾಲಿಟಿ ಕಂಟೆಂಟ್ ಇಟ್ಟುಕೊಂಡು ಹೆಣೆಯಲಾಗಿರುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಈ ಚಿತ್ರದಲ್ಲಿದೆ. ದೊಡ್ಡ ಕುಟುಂಬದ ಹೆಣ್ಣುಮಗಳೊಬ್ಬಳು ದಾರಿ ತಪ್ಪಿದಾಗ ಏನೆಲ್ಲಾ ಅನಾಹುತ ಆಗಲಿದೆ ಎನ್ನುವುದು ಚಿತ್ರದ ಕಂಟೆಂಟ್.
ಒಂದಷ್ಟು ಜಾಹೀರಾತು ಚಿತ್ರಗಳಲ್ಲಿ ನಟಸುವ ಜೊತೆಗೆ ಮಾಡೆಲ್ ಕೂಡ ಆಗಿದ್ದ ಶ್ರೇಯಾ ಪಾವನಾ ಈ ಚಿತ್ರದಲ್ಲಿ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಚೇತನ್ ಸಾಸ್ತಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಹಾಡುಗಳು ಹಾಗೂ ಟೀಸರ್ ಪ್ರದರ್ಶನದ ನಂತರ ಮಾತನಾಡಿದ ನಿರ್ಮಾಪಕ ಲಕ್ಷ್ಮೀನಾರಾಯಣರಾಜೇ ಅರಸ್ ನಮ್ಮ ಚಿತ್ರದಲ್ಲಿ ಉದಯ್ ಅವರೇ ನಾಯಕ. ಶೇ.30ರಷ್ಟು ಚಿತ್ರೀಕರಣ ಮುಗಿದ ಮೇಲೆ ಅವರ ದುರ್ಘಟನೆ ನಡೆಯಿತು. ನಂತರ ಚಿತ್ರಕಥೆಯಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡು ಅವರ ಪಾತ್ರವನ್ನು ನಾನು ಮುಂದುವರೆಸಿ ಶೂಟಿಂಗ್ ಕಂಪ್ಲೀಟ್ ಮಾಡಿದ್ದೇವೆ. ಚಿಕ್ಕಮಗಳೂರು, ಮೈಸೂರು ಹಾಗೂ ಸಕಲೇಶಪುರದ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ತುಂಬಿದ ಮನೆಯಲ್ಲಿ ಹೆಣ್ಣೊಬ್ಬಳು ತಪ್ಪು ಮಾಡಿದರೆ, ಏನೆಲ್ಲಾ ಅನಾಹುತ ನಡೆಯುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ ಎಂದು ಹೇಳಿದರು.
ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಅತಿ ಶೀಘ್ರದಲ್ಲಿ ಬೆಳ್ಳಿ ಪರದೆಗೆ ಬರಲಿದೆ.
Be the first to comment