ಕನ್ನಡದ ಮೊದಲ ಬಯೋಪಿಕ್ ಚಿತ್ರ ಎನ್ನುವ ಹೆಸರಿಗೆ ಪಾತ್ರವಾಗಿರುವ ವಿಜಯಾನಂದ ಚಿತ್ರ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನವನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ತೆರೆದಿಡುವ ಮೂಲಕ ಗಮನ ಸೆಳೆಯುತ್ತದೆ.
ಒಂದು ಲಾರಿಯನ್ನು ಖರೀದಿಸಿ ಅದನ್ನು ಸ್ವತಃ ಚಲಾಯಿಸಿ ಬಳಿಕ ದೇಶದ ಎಲ್ಲೆಡೆ ಸಾರಿಗೆ ಉದ್ಯಮವನ್ನು ವಿಸ್ತರಿಸಿದ ವಿಜಯ ಸಂಕೇಶ್ವರ ಅವರ ಬದುಕಿನ ಕುರಿತ ಚಿತ್ರ ನೋಡುಗರಲ್ಲಿ ರೋಮಾಂಚನವನ್ನು ಉಂಟು ಮಾಡುತ್ತದೆ. ಚಿತ್ರಕ್ಕೆ ಅಗತ್ಯವಾದ ಕಮರ್ಷಿಯಲ್ ಅಂಶಗಳನ್ನು ಸೇರಿಸಲಾಗಿದೆ. ಉತ್ತರ ಕರ್ನಾಟಕದ ಜವಾರಿ ಸಂಭಾಷಣೆಗಳು, ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿ ನೋಡುಗರಿಗೆ ಖುಷಿಯನ್ನು ನೀಡುತ್ತದೆ.
ಚಿತ್ರದಲ್ಲಿ ವಿಜಯ ಸಂಕೇಶ್ವರ ಅವರ ಉದ್ಯಮದ ಹೋರಾಟದ ಬದುಕನ್ನು ರೋಚಕವಾಗಿ ತೋರಿಸುವ ಯತ್ನವನ್ನು ಮಾಡಲಾಗಿದೆ. ಕಷ್ಟವನ್ನು ಮೆಟ್ಟಿ ಯಶಸ್ವಿ ಉದ್ಯಮಿ ಹೇಗಾದರು ಎನ್ನುವುದನ್ನು ಚಿತ್ರದಲ್ಲಿ ಹೈಲೈಟ್ ಆಗಿ ತೋರಿಸಲಾಗಿದೆ.
ವಿಜಯ ಸಂಕೇಶ್ವರ ಅವರು ತಮ್ಮ ಉದ್ಯಮದ ಬದುಕನ್ನು ಕಟ್ಟಿಕೊಳ್ಳಲು ಶ್ರಮ ಪಟ್ಟಂತೆ, ಚಿತ್ರವನ್ನು ಕಟ್ಟಿಕೊಡಲು ನಿರ್ದೇಶಕರು ಸಾಕಷ್ಟು ಶ್ರಮವನ್ನು ಪಟ್ಟಿದ್ದಾರೆ. ವಿಜಯ ಸಂಕೇಶ್ವರ ಅವರು ಉದ್ಯಮದ ಹಾದಿಯಲ್ಲಿ ಯಶಸ್ಸು ಪಡೆಯಲು ಯಾವೆಲ್ಲ ಸಮಸ್ಯೆ ಎದುರಿಸಿದರು, ಅವರ ಜೊತೆ ಯಾರು ಇದ್ದರು ಎನ್ನುವ ಕುತೂಹಲಕ್ಕೆ ಚಿತ್ರ ಉತ್ತರವನ್ನು ನೀಡುತ್ತದೆ.
ವಿಜಯ ಸಂಕೇಶ್ವರ ಪಾತ್ರದಲ್ಲಿ ನಟಿಸಿರುವ ನಿಹಾಲ್ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಿರಿಯ ನಟ ಅನಂತನಾಗ್ ಎಂದಿನಂತೆ ಇಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಉತ್ತರ ಕರ್ನಾಟಕದ ಅವರ ಸಂಭಾಷಣೆಗಳು ಗಮನ ಸೆಳೆಯುತ್ತವೆ. ಪತ್ರಿಕಾ ಸಂಪಾದಕರಾಗಿ ಪ್ರಕಾಶ್ ಬೆಳವಾಡಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಗೋಪಿ ಸುಂದರ್ ಅವರ ಸಂಗೀತ ಚಿತ್ರಕ್ಕೆ ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಿದೆ. ರಘು ನಿಡುವಳ್ಳಿ ಅವರ ಸಂಭಾಷಣೆ ಗಮನ ಸೆಳೆಯುತ್ತದೆ. ಎಡಿಟಿಂಗ್ ಹಾಗೂ ಕೆಮೆರಾ ಚಳಕ ಚಿತ್ರ ಸುಂದರವಾಗಿ ಮೂಡಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
Be the first to comment