ರೋಹಿಣಿ ಸಿಂಧೂರಿ ವಿರುದ್ಧ ಗಾಯಕನ ಆರೋಪ, ತನಿಖೆಗೆ ಆದೇಶ

ಹಿಂದಿಯ ಖ್ಯಾತ ಗಾಯಕ, ನಟ ಲಕ್ಕಿ ಅಲಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಅವರ ಪತಿಯ ವಿರುದ್ಧ ಅಕ್ರಮ ಜಮೀನು ಅತಿಕ್ರಮಣದ ಆರೋಪ ಹೊರಿಸಿದ್ದಾರೆ.

ಈ ಬಗ್ಗೆ ವಿಷಯ ತಿಳಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರಿಗೆ ಆದೇಶ ಹೊರಡಿಸಿದ್ದಾರೆ.

ಲಕ್ಕಿ ಅಲಿ ಬೆಂಗಳೂರಿನ ಹೊರವಲಯದಲ್ಲಿ ತಮ್ಮ ಫಾರಂ ಹೌಸ್‌ನಲ್ಲಿ ಬಹಳ ವರ್ಷಗಳಿಂದ ವಾಸವಿದ್ದು, ಅವರ ಜಮೀನನ್ನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಪತಿ ಸುಧೀರ್ ರೆಡ್ಡಿ ಅಕ್ರಮವಾಗಿ ತಮ್ಮ ಜಮೀನು ಅತಿಕ್ರಮಣ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಲಕ್ಕಿ ಅಲಿ, ”ನಾನು ಮಕ್ಸೂದ್ ಮೊಹಮ್ಮದ್ ಅಲಿ ಅಲಿಯಾಸ್ ಲಕ್ಕಿ ಅಲಿ, ಖ್ಯಾತ ನಟ ಮೆಹಮೂದ್ ಅಲಿಯ ಪುತ್ರ. ನಾನು ಕೆಲಸದ ನಿಮಿತ್ತ ದುಬೈಗೆ ಬಂದಿದ್ದೇನೆ. ನನ್ನ ಅಧಿಕೃತ ಫಾರಂ ಯಲಹಂಕದ ಕೆಂಚೇನಹಳ್ಳಿಯಲ್ಲಿ ಇದ್ದು, ನನ್ನ ಪ್ರಾಪರ್ಟಿಯನ್ನು ಅಕ್ರಮವಾಗಿ ಸುಧೀರ್ ರೆಡ್ಡಿ ಹಾಗೂ ಮಧು ರೆಡ್ಡಿ ಎಂಬುವರು ಬೆಂಗಳೂರಿನ ಲ್ಯಾಂಡ್ ಮಾಫಿಯಾ ಸಹಾಯದೊಂದಿಗೆ ಅತಿಕ್ರಮಿಸಿದ್ದಾರೆ. ಇದಕ್ಕೆ ಸುಧೀರ್ ರೆಡ್ಡಿಯ ಪತ್ನಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನೆರವು ಸಹ ಇದೆ” ಎಂದು ಡಿಜಿಪಿ ಕರ್ನಾಟಕ ಅವರಿಗೆ ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್ 7 ರಂದು ನ್ಯಾಯಾಲಯದಲ್ಲಿ ವಿಚಾರಣೆ ಇದ್ದು, ಸುಳ್ಳು ದಾಖಲೆಗಳ ಮೂಲಕ ಅವರು ಆಸ್ತಿಯ ಮೇಲೆ ತಮ್ಮ ಒಡೆತನ ಸಾಭೀತುಪಡಿಸಲು ಯತ್ನಿಸುತ್ತಿದ್ದಾರೆ. ಆದರೆ ತಾವು ನನಗೆ ಸಹಾಯ ಮಾಡಿ ಎಂದು ಲಕ್ಕಿ ಅಲಿ ಕೋರಿದ್ದಾರೆ.

ಹಲವು ಸೂಪರ್ ಹಿಟ್ ಆಲ್ಬಂಗಳನ್ನು ಬಿಡುಗಡೆ ಮಾಡಿರುವ ಲಕ್ಕಿ ಅಲಿ, ಎ.ಆರ್.ರೆಹಮಾನ್ ಸೇರಿದಂತೆ ಹಲವು ಖ್ಯಾತನಾಮ ಸಂಗೀತ ನಿರ್ದೇಶಕರಿಗಾಗಿ ಹಾಡುಗಳನ್ನು ಹಾಡಿದ್ದಾರೆ. ನಟನೆಯನ್ನೂ ಮಾಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!