ರೆಬಲ್ ಸ್ಟಾರ್ ಅಂಬರೀಷ್ ಮತ್ತು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಷ್ ಅವರು ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ.
ಡಿಸೆಂಬರ್ 2ನೇ ವಾರದಲ್ಲಿ ಅಭಿಷೇಕ್ ಅವರ ನಿಶ್ಚಿತಾರ್ಥ ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ಪುತ್ರಿ, ಖ್ಯಾತ ಮಾಡೆಲ್ ಅವಿವಾ ಬಿದ್ದಪ್ಪ ಜೊತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಅಭಿಷೇಕ್ ಅಂಬರೀಷ್ ಅವರ ಮದುವೆ ಅದಾಗಲೇ ನಿಶ್ಚಯವಾಗಿದ್ದು, ನಿಶ್ಚಿತಾರ್ಥ ಸಮಾರಂಭ ಡಿಸೆಂಬರ್ ಎರಡನೇ ವಾರದಲ್ಲಿ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ನಿಶ್ಚಿತಾರ್ಥದವರೆಗೂ ಹುಡುಗಿಯ ಬಗ್ಗೆ ಅಥವಾ ಮದುವೆ ಬಗ್ಗೆ ಯಾರಿಗೂ ವಿಚಾರ ತಿಳಿಯಬಾರದು ಎನ್ನುವ ಕಾರಣದಿಂದ ಹುಡುಗಿ ಹಾಗೂ ನಿಶ್ಚಿತಾರ್ಥದ ದಿನಾಂಕವನ್ನು ಕುಟುಂಬದ ಸದಸ್ಯರು ಗುಟ್ಟಾಗಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಶ್ಚಿತಾರ್ಥದ ಸಿದ್ಧತೆಗಳು ನಡೆಯುತ್ತಿದ್ದು, ಮದುವೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.
ಕೆಲ ದಿನಗಳ ಹಿಂದೆ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದ ಅಭಿಷೇಕ್ ಅಂಬರೀಷ್, ಪ್ರತಿ ಸಲ ನನ್ನ ಮದುವೆ, ನಿಶ್ಚಿತಾರ್ಥದ ಬಗ್ಗೆ ನ್ಯೂಸ್ ಕೇಳುತ್ತಿದ್ದೇನೆ. ನಾನು ನಿತ್ಯ ಕನಕಪುರಕ್ಕೆ ಶೂಟಿಂಗ್ ಗೆ ಹೋಗುತ್ತಿದ್ದೇನೆ. ಇದರ ಮಧ್ಯೆ ಯಾವಾಗ ಹುಡುಗಿ ನೋಡಿದೆ, ಯಾವಾಗ ನಿಶ್ಚಿತಾರ್ಥ ಮಾಡಿಕೊಂಡೆ ಎಂದು ಗೊತ್ತಿಲ್ಲ. ಪದೇ ಪದೇ ನಿಶ್ಚಿತಾರ್ಥದ ಬಗ್ಗೆ ಮಾತನಾಡ್ತಿದ್ರೆ ಮುಂದೆ ನನಗೆ ಯಾರೂ ಹುಡುಗಿ ಕೊಡಲ್ಲ” ಎಂದು ಜೋಕ್ ಹಾರಿಸಿದ್ದರು.
___
Be the first to comment