ಸದ್ದು ಮಾಡುತ್ತಿದೆ “ತಿಮ್ಮಯ್ಯ & ತಿಮ್ಮಯ್ಯ” ಟ್ರೇಲರ್

ಹಿರಿಯ ನಟ ಅನಂತನಾಗ್ ಹಾಗೂ ದೂದ್ ಪೇಡ ದಿಗಂತ್ ತಾತ – ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ “ತಿಮ್ಮಯ್ಯ & ತಿಮ್ಮಯ್ಯ” ಚಿತ್ರದ ಟ್ರೇಲರ್ ಬಾರೀ ಸದ್ದು ಮಾಡುತ್ತಿದೆ.

“ನನಗೆ ಮುಂಬೈನಿಂದ ನಿರ್ದೇಶಕ ಸಂಜಯ್ ಶರ್ಮ ತಿಮ್ಮಯ್ಯ & ತಿಮ್ಮಯ್ಯ ಚಿತ್ರದ ಸ್ಕ್ರಿಪ್ಟ್ ಕಳುಹಿಸಿದ್ದರು. ಸ್ಕ್ರಿಪ್ಟ್ ಇಂಗ್ಲಿಷ್ ನಲ್ಲಿತ್ತು. ಓದುತ್ತಾ ಹೋದಾಗ, ಕಥೆ ತುಂಬಾ ಹಿಡಿಸಿತು. ಬೆಂಗಳೂರಿಗೆ ಬನ್ನಿ ಮಾತನಾಡೋಣ ಎಂದೆ. ಕರ್ನಾಟಕದವರೇ ಆಗಿದ್ದು, ಮುಂಬೈನಲ್ಲಿ ಆಯಡ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂಜಯ್ ಶರ್ಮ ಒಳ್ಳೆಯ ಕಥೆ ಮಾಡಿದ್ದಾರೆ. ಅವರ ತಮ್ಮ ರಾಜೇಶ್ ಶರ್ಮ ನಿರ್ಮಾಣ‌ ಮಾಡಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೀನಿ” ಎಂದು ಅನಂತನಾಗ್ ಹೇಳಿದ್ದಾರೆ.

“ನನಗೆ ಸಂಜಯ್ ಅವರು ಈ ಕಥೆ ಹೇಳಿದಾಗ, ತಾತನ ಪಾತ್ರ ಅನಂತನಾಗ್ ಅವರು ಮಾಡುತ್ತಾರೆ ಎಂದರು‌. ಈ ತರಹ ಪಾತ್ರ ಅನಂತನಾಗ್ ಸರ್ ಅವರಿಂದ ಮಾತ್ರ ಮಾಡಲು ಸಾಧ್ಯ. ನಾನು ಅವರ ಜೊತೆಗೆ ಸಾಕಷ್ಟು ಚಿತ್ರದಲ್ಲಿ ಅಭಿನಯಿಸಿದ್ದೇನೆ. ಆದರೆ ಈ ಚಿತ್ರದಲ್ಲಿ ಅಭಿನಯಿಸಿದ್ದು ಹೆಚ್ಚು ಖುಷಿಯಾಗಿದೆ. ನನ್ನ ಹೆಂಡತಿ ಐಂದ್ರಿತಾ ರೇ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ನಾಯಕ ನಟ ದಿಗಂತ್ ಕೋರಿದ್ದಾರೆ.

“ನನಗೆ ಯೂರೋಪಿನಿಂದ ಒಂದು ಡಾಕ್ಯುಮೆಂಟರಿ ಮಾಡಲು ಆಫರ್ ಬಂದಿತ್ತು. ಆ ಸಮಯದಲ್ಲಿ ಎರಡು, ಮೂರು ಕಥೆಗಳು ನನಗೆ ಸಿಕ್ಕವು. ಅದರಲ್ಲಿ ತಾತ – ಮೊಮ್ಮಗನ ಬಾಂಧವ್ಯದ ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧಾರ ಮಾಡಿದ್ದೆವು. ತಾತನ ಪಾತ್ರವನ್ನು ಅನಂತನಾಗ್ ಸರ್ ಅವರ ಹತ್ತಿರ ಮಾಡಿಸಬೇಕೆಂಬ ಆಸೆಯಾಯಿತು. ಅವರು ಕಥೆ ಕೇಳಿ ಅಭಿನಯಿಸಲು ಒಪ್ಪಿದ್ದು ಖುಷಿಯಾಯಿತು. ಮೊಮ್ಮಗನ ಪಾತ್ರ ಮಾಡಿರುವ ದಿಗಂತ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಅನೂಪ್ ಸೀಳಿನ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್. ಚಿತ್ರ ಡಿಸೆಂಬರ್ 2 ರಂದು ಬಿಡುಗಡೆಯಾಗುತ್ತಿದೆ ಎಂದು ‌ನಿರ್ದೇಶಕ ಸಂಜಯ್ ಶರ್ಮ ಹೇಳಿದ್ದಾರೆ.

ಬಾಲಕೃಷ್ಣ ತೋಟ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ಗುಣ ಕಲಾ ನಿರ್ದೇಶನ ಹಾಗೂ ದೀಕ್ಷಿತ್ ಕುಮಾರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!