‘ಕಾಂತಾರ ಚಲನಚಿತ್ರದಲ್ಲಿರುವ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ಹೇಳಿರುವುದು ನಿಜವಲ್ಲ’ ಎಂಬ ನಟ ಚೇತನ್ ಟ್ವೀಟ್ ಬಗ್ಗೆ ಆಕ್ಷೇಪಿಸಿ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
‘ನನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಚೇತನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತಳ್ಳಿ ಹಾಕಿದೆ.
ಅರ್ಜಿದಾರರ ಪರ ವಕೀಲರು, ‘ಚೇತನ್, ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ ಅಥವಾ ಸಮಾಜದಲ್ಲಿ ಅಶಾಂತಿಯೂ ಉಂಟಾಗಿಲ್ಲ. ಆದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಅದನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ‘ಅರ್ಜಿದಾರರು ಉದ್ದೇಶಪೂರ್ವಕ ವಾಗಿಯೇ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಈ ಹಂತದಲ್ಲಿ ಎಫ್ಐಆರ್ ರದ್ದುಗೊಳಿಸಬಾರದು. ಅರ್ಜಿ ವಜಾಗೊಳಿಸಿ ತನಿಖೆ ಎದುರಿಸುವಂತೆ ಆದೇಶ ಮಾಡುತ್ತೇನೆ’ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಪ್ರಕರಣ ಇನ್ನೂ ತನಿಖಾ ಹಂತದಲ್ಲಿ ಇರುವಾಗ ಕೋರ್ಟ್ ಹಸ್ತಕ್ಷೇಪ ಮಾಡಬಾರದು’ ಎಂಬ ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಚೇತನ್ ಅರ್ಜಿಯನ್ನು ತಿರಸ್ಕರಿಸಿತು.
___

Be the first to comment