ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ “ಬಿಂಗೊ” ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು.
ಮೊದಲ ಸನ್ನಿವೇಶಕ್ಕೆ ನಟ ವಸಿಷ್ಠ ಸಿಂಹ ಆರಂಭಫಲಕ ತೋರಿದರು. ಸಚಿವ ವಿ.ಸೋಮಣ್ಣ ಅವರು ಕ್ಯಾಮೆರಾ ಚಾಲನೆ ಮಾಡಿದರು. ಸಚಿವರಾದ ಮುನಿರತ್ನ ಮುಂತಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.
“ಬಿಂಗೊ” ನನ್ನ ನಿರ್ದೇಶನದ ಎರಡನೇ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ “ಶಂಭೋ ಶಿವ ಶಂಕರ” ಸದ್ಯದಲ್ಲೇ ಬಿಡುಗಡೆಯಾಗಲಿದೆ. “ಬಿಂಗೊ” ಪದಕ್ಕೆ ಹಲವು ಅರ್ಥಗಳಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ಹೇಳಬಹುದು. ಆರು ಮುಖ್ಯಪಾತ್ರಗಳಿರುತ್ತದೆ. ಅದರಲ್ಲಿ ಅತೀ ಮುಖ್ಯಪಾತ್ರದಲ್ಲಿ ರಾಗಿಣಿ ಅವರು ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಹೇಳಿದರು.
ಆರ್ ಕೆ ಚಂದನ್ ನಾಯಕನಾಗಿ, ರಕ್ಷಾ ನಿಂಬರ್ಗಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದ ಕಲಾವಿದರು “ಬಿಂಗೊ”ದಲ್ಲಿರುತ್ತಾರೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ ಎಂದು ಶಂಕರ್ ಕೋನಮಾನಹಳ್ಳಿ ತಿಳಿಸಿದರು.
ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ಪಾತ್ರದ ಕುರಿತು ಹೆಚ್ಚು ಹೇಳುವ ಹಾಗಿಲ್ಲ. ಮುಂದೆ ನನ್ನ ಪಾತ್ರದ ಬಗ್ಗೆ ಮಾಹಿತಿ ನೀಡುತ್ತೀನಿ. ಒಟ್ಟಿನಲ್ಲಿ ನಾನು ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಸ್ವಲ್ಪ ಭಿನ್ನ ಅಂತ ಹೇಳಬಹುದು. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಲು ಖುಷಿಯಾಗುತ್ತದೆ ಎಂದು ರಾಗಿಣಿ ದ್ವಿವೇದಿ ಹೇಳಿದರು.
ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಚಿತ್ರ ನಿರ್ಮಿಸುತ್ತಿದ್ದಾರೆ.
__
Be the first to comment