ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎನ್ನುವ ಆರೋಪದ ಮೇರೆಗೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಹೈದರಾಬಾದ್ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ‘ಓ ಪರಿ..’ ಹಾಡಿನ ಸಾಹಿತ್ಯ ಆಕ್ಷೇಪಾರ್ಹವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ನಟಿ ಕರಾಟೆ ಕಲ್ಯಾಣಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಈಗಾಗಲೇ ರಿಲೀಸ್ ಆಗಿರುವ ಈ ಹಾಡು ಯೂಟ್ಯೂಬ್ ನಲ್ಲಿ ಉತ್ತಮ ವ್ಯೂವ್ಸ್ ಪಡೆದುಕೊಂಡಿದೆ. ಧಾರ್ಮಿಕ ಪಠಣಗಳಿರುವ ಈ ಹಾಡಿನಲ್ಲಿ ನೃತ್ಯ ಮಾಡುವವರು ಕಡಿಮೆ ಬಟ್ಟೆ ಧರಿಸಿದ್ದಾರೆ ಎಂದು ಕಲ್ಯಾಣಿ ಆರೋಪಿಸಿದ್ದಾರೆ.
ಇಂಥ ಪ್ರಚೋದನಾಕಾರಿ ಹಾಡುಗಳನ್ನು ಚಿತ್ರೀಕರಿಸುವ ಮೊದಲು ನಮ್ಮ ಭಾವನೆಗೆ ನೋವಾಗುತ್ತದೆ ಎನ್ನುವ ಯೋಚನೆ ಬೇಕು. ಹಿಂದೂ ಧರ್ಮ ಉಳಿಸಲು ಸಾಧ್ಯವಾಗದಿದ್ದರೂ ಅದನ್ನು ಅವಮಾನಿಸಬೇಡಿ. ನೀವು ಕ್ಷಮೆ ಕೇಳಲೇ ಬೇಕು. ಇಲ್ಲದಿದ್ದರೆ ನಿಮ್ಮ ಸ್ಟುಡಿಯೋಗೆ ನುಗ್ಗಿ ಪ್ರತಿಭಟನೆ ಮಾಡುತ್ತೇವೆ ಎಂದು ಕರಾಟೆ ಕಲ್ಯಾಣಿ ಎಚ್ಚರಿಕೆ ನೀಡಿದ್ದಾರೆ.
ಹೈದರಾಬಾದ್ ಸೈಬರ್ ಪೊಲೀಸರು ‘ನವೆಂಬರ್ 2ರಂದು ಲಲಿತ್ ಕುಮಾರ್ ಮತ್ತು ಕರಾಟೆ ಕಲ್ಯಾಣಿ ಅವರಿಂದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರ ಹಾಡಿನ ಬಗ್ಗೆ ನಮಗೆ ದೂರು ಬಂದಿದೆ. ಇದು ಕಾನೂನು ಸಮಸ್ಯೆ ಆಗಿದ್ದರಿಂದ ನಾವು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಪೊಲೀಸರು ಐಪಿಸಿ ಸೆಕ್ಷನ್ 153 (ಎ) ಐಪಿಸಿ ಮತ್ತು 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
____
Be the first to comment