Nahi Jnanena sadrusham : ನಹಿ ಜ್ಞಾನೇನ ಸದೃಶಂ ಟ್ರೇಲರ್ ಬಿಡುಗಡೆ

ವಿಭಿನ್ನ ಶೀರ್ಷಿಕೆ ’ನಹಿ ಜ್ಞಾನೇನ ಸದೃಶಂ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಅದ್ದೂರಿಯಾಗಿ ಬಿಡುಗಡೆಗೊಂಡಿತು. ಶಿಕ್ಷಣ ತಜ್ಘರುಗಳಾದ ಶಶಿ, ಮರಿಸ್ವಾಮಿರೆಡ್ಡಿ, ಪವನ್‌ಕುಮಾರ್, ಶ್ರೀನಿವಾಸಲು, ಶಾಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.

ಮಹಾಭಾರತದ ನಾಲ್ಕನೆ ಅಧ್ಯಾಯದಲ್ಲಿ ಬರುವ ಶ್ಲೋಕವನ್ನು ಟೈಟಲ್‌ಗೆ ಬಳಸಲಾಗಿದೆ. ಶಿಕ್ಷಣ ಜತೆಗೆ ಮನರಂಜನೆ ಅಂತ ಇಂಗ್ಲೀಷ್ ಅಡಿಬರಹವಿದೆ. ಅಮೇರಿಕಾ ನಿವಾಸಿ ಟೆಕ್ಕಿ ಕನ್ನಡಿಗ ರಾಮ್ ಬಿಡುವು ಮಾಡಿಕೊಂಡು ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವ ಜತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ನಿರ್ಮಾಣವೆಂದು ಗೆಳಯರೇ ಸೇರಿಕೊಂಡು ಬಂಡವಾಳ ಹೂಡಿದ್ದಾರೆ. ಅದಕ್ಕಾಗಿ ಫ್ರೆಂಡ್ಸ್ ಫಂಡಡ್ ಫಿಲಿಂಸ್ ಎಂದು ಹೇಳಿಕೊಂಡಿದ್ದಾರೆ.

ಸಿನಿಮಾದ ಕುರಿತು ಹೇಳುವುದಾದರೆ ಆಶ್ರಮ ಸೇರಲು ಅಮೇರಿಕಾದಿಂದ ಬಂದ ರೋಬೊಟಿಕ್ ಇಂಜಿನಿಯರ್ ರಾಮ್, ಕಾರಣಾಂತರಗಳಿಂದ ಬಳ್ಳಾರಿಯ ಬೆಸ್ಟ್ ಶಾಲೆಯಲ್ಲಿ ತಾತ್ಕಾಲಿಕ ಗಣಿತದ ಶಿಕ್ಷಕನಾಗಿ ಸೇರುತ್ತಾನೆ. ಶಾಲೆಯಲ್ಲಿ ತನ್ನದೆ ಆದ ವಿಭಿನ್ನ ರೀತಿಯ ಶಿಕ್ಷಣ ಕೊಡುವ ಶೈಲಿಯಿಂದ ಮಕ್ಕಳು, ಅವರ ಪೋಷಕರು ಹಾಗೂ ಇತರೆ ಶಿಕ್ಷಕರೊಂದಿಗೆ ಹಲವು ಘರ್ಷಣೆಗಳುಂಟಾಗಿ ಅಪವಾದಗಳನ್ನು ಎದುರಿಸುತ್ತಾನೆ. ಈ ಅಪಾರ್ಥಗಳನ್ನು ದೂರ ಮಾಡಲು ಮಕ್ಕಳಿಗೆ ನಿಧಿ ಸಂಗ್ರಹಿಸುವ ಆಟವನ್ನು ಆಡಿಸಿ ಅದರ ಮೂಲಕ ಜ್ಘಾನದ ಪ್ರಾಮುಖ್ಯತೆ ಹಾಗೂ ಅದರ ಉಪಯೋಗದ ಮಹತ್ವವನ್ನು ಎಲ್ಲರಿಗೂ ತಿಳಿಸುವ ತನ್ನ ಉದ್ದೇಶವನ್ನು ವ್ಯಕ್ತಪಡಿಸುತ್ತಾನೆ.

ತಾರಗಣದಲ್ಲಿ ಚಿಣ್ಣರುಗಳಾದ ವೇದಿಕಾ, ಅಭಪಾಲಿ, ಮಹೇಶ್.ಎಸ್.ಪಿ, ಬೆಟ್ಟೇಶ್, ಶರತ್, ಗಗನ, ಶ್ರೀನಿಧಿ, ಲಿಂಗೇಶ್ ಇವರೊಂದಿಗೆ ಅರುಣಾಬಾಲರಾಜ್, ಎಸ್.ಪಿ.ಮಹೇಶ್ ರಾಘವೇಂದ್ರನಾಯಕ್, ವಾಸುದೇವಮೂರ್ತಿ ಮುಂತಾದವರು ನಟಿಸಿದ್ದಾರೆ. ಪ್ರಮೋದ್‌ಮರವಂತೆ ಸಾಹಿತ್ಯದ ಎರಡು ಗೀತೆಗಳಿಗೆ ಅರ್ಜುನ್‌ರಾಮು ಸಂಗೀತವಿದೆ. ಸಂಕಲನ ಶಿವಕುಮಾರ್, ಸಾಹಸ ಸುದರ್ಶನ್-ರಾಮ್, ನೃತ್ಯ ರಾಘವೇಂದ್ರ-ಶ್ವೇತಾ-ಜಗನ್-ರುತಿಕ್‌ರೋಷನ್ ಅವರದಾಗಿದೆ. ಹಲ್ಲಿಪುರಕೆರೆ, ಸಂಗನಕಲ್ಲು, ಬಳ್ಳಾರಿ ಫೋರ್ಟ್, ಮೌಕಕಾಡು, ದರೋಜ ಲೇಕ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಮಕ್ಕಳ ಚಿತ್ರವೆಂದು ಪರಿಗಣಿಸಿ ’ಯು’ ಪ್ರಮಾಣಪತ್ರ ನೀಡಿದೆ. ಅಂದಹಾಗೆ ಸಿನಿಮಾವು ನವೆಂಬರ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!