ನಿರ್ದೇಶನ: ಅಮೋಘವರ್ಷ
ನಿರ್ಮಾಪಕಿ: ಅಶ್ವಿನಿ ಪುನೀತ್ ರಾಜ್ ಕುಮಾರ್
ರೇಟಿಂಗ್: 4.5/5
ಯಾರಿಗೇ ಆಗಲಿ, ಪ್ರಕೃತಿಯನ್ನು ಶೋಧಿಸುತ್ತಾ ಹೊರಟರೆ ಮೈ ನವಿರೇಳಿಸುವ ಪಯಣದ ಅನುಭವ ಆಗುತ್ತದೆ. ಆ ಅನುಭವ ಪುನೀತ್ ರಾಜ್ ಕುಮಾರ್ ನಟನೆಯ ಗಂಧದಗುಡಿ ನೋಡಿದಾಗ ಪ್ರೇಕ್ಷಕರಿಗೆ ಆಗುತ್ತದೆ. ಪುನೀತ್ ರಾಜ್ ಕುಮಾರ್ ಅವರ ಪ್ರಕೃತಿಯ ಶೋಧ ನಡೆಸುವ ಯಾತ್ರೆಯಲ್ಲಿ ಕುತೂಹಲ, ಕಲಾತ್ಮಕತೆ, ಪ್ರಶಾಂತ ನಿಲುವು ಗೋಚರ ಆಗುತ್ತದೆ.
ನಾಗರ ಹೊಳೆ ಹುಲಿ ಅಭಯಾರಣ್ಯದಿಂದ ಆರಂಭವಾಗುವ ಪುನೀತ್ ರಾಜ್‍ಕುಮಾರ್ ಮತ್ತು ನಿರ್ದೇಶಕ ಅಮೋಘ ವರ್ಷ ಅವರ ಕುತೂಹಲದ ಯಾತ್ರೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ. ರಾಜ್ ಕುಮಾರ್ ಹುಟ್ಟಿದ ಗಾಜನೂರಿನ ಮನೆ, ಮಲೆನಾಡಿನ ದಟ್ಟ ಅಡವಿ, ಕಡಲ ತೀರ ಮತ್ತು ಆಳ ಹೀಗೆ ಹಲವು ವಿಸ್ಮಯಗಳನ್ನು ನೋಡುತ್ತಾ ಹೋಗುವುದು ಹಬ್ಬದ ಅನುಭವ ನೀಡುತ್ತದೆ.
ಗಾಜನೂರು, ಬಿಳಿಗಿರಿ ರಂಗನ ಬೆಟ್ಟ, ನೇತ್ರಾಣಿ, ಬಳ್ಳಾರಿ ಸುತ್ತಲಿನ ಡೆಕ್ಕನ್ ಫಾರೆಸ್ಟ್, ಕಾಳಿನದಿ ಹೀಗೆ ಅಮೋಘ ವರ್ಷ ಅವರ ಜೊತೆ ಸಂಚರಿಸುವ ಪುನೀತ್ ರಾಜ್‍ಕುಮಾರ್ ಪ್ರಬುದ್ಧ ಸಂಶೋಧಕರಂತೆ, ಸರಳತೆಯ ಸಾಕಾರ ಮೂರ್ತಿಯಂತೆ ಕಾಣುತ್ತಾರೆ.
ಬುಡಕಟ್ಟು ಸಮುದಾಯದ ಜೊತೆ ಬೆರೆಯುವುದು, ಹಿಂದುಳಿದ ಪ್ರದೇಶದ ಶಾಲೆಯ ಮಕ್ಕಳ ಜೊತೆ ಮಗುವಾಗಿ ಬೆರೆಯುವುದು, ಮತ್ತು ಅಣ್ಣಾವ್ರು ಹಾಡಿದ ‘ಎಲ್ಲಾದರು ಇರು ಎಂತಾದರು ಇರು..’ ಹಾಡನ್ನು ಮಕ್ಕಳಿಗೆ ಹೇಳಿಕೊಡುವುದು, ಕಾಳಿನದಿಯಲ್ಲಿ ಈಜುವುದು, ಹಾವಿನ ಬಗ್ಗೆ ಭಯ ಹೊರ ಹಾಕಿ ತಮಾಷೆ ಮಾಡುವುದು ಪ್ರೇಕ್ಷಕರ ಮನಸಿನಲ್ಲಿ ಉಳಿಯುತ್ತದೆ.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಆರಂಭದಲ್ಲಿ ಚಿತ್ರದ ಆಶಯದ ಬಗ್ಗೆ ಮಾತನಾಡಿದ್ದಾರೆ. ಪ್ರತೀಕ್ ಶೆಟ್ಟಿ ಕ್ಯಾಮೆರಾ ಪ್ರಕೃತಿಯ ವಿಹಂಗಮ ನೋಟ ಪರಿಚಯಿಸುತ್ತದೆ. ಅಜನೀಶ್ ಲೋಕನಾಥ್ ಸಂಗೀತ ಮನ ಮುಟ್ಟುತ್ತದೆ.
ಅಪ್ಪು ಚಿತ್ರದಲ್ಲಿ ಆಪ್ತ ಆಗಿ ಕಾಣಿಸುತ್ತಾರೆ. ಅಪ್ಪು ಕೊನೆಯಲ್ಲಿ ನಮ್ಮ ನಾಡನ್ನು ಜನರನ್ನು ರಕ್ಷಿಸು ಎಂದು ವನದೇವತೆಗೆ ಮಾಡುವ ಪ್ರಾರ್ಥನೆ ಮನಸಿಗೆ ಅಪ್ಪು ಈಗ ಇಲ್ಲ ಎನ್ನುವ ನೋವನ್ನು ತರುತ್ತದೆ.
_______
Be the first to comment