Head Bush Movie Review : ಜಯರಾಜ್ ಆರ್ಭಟ “ಹೆಡ್ ಬುಷ್”

ಚಿತ್ರ: ಹೆಡ್ ಬುಷ್

ನಿರ್ದೇಶನ: ಶೂನ್ಯ
ತಾರಾಗಣ: ಧನಂಜಯ್, ಪಾಯಲ್ ರಜಪೂತ್, ದೇವರಾಜ್, ರಘು ಮುಖರ್ಜಿ, ಶ್ರುತಿ ಹರಿಹರನ್ ಮೊದಲಾದವರು
ರೇಟಿಂಗ್: 3/5

ಬೆಂಗಳೂರಿನಲ್ಲಿ 70- 80ರ ದಶಕದಲ್ಲಿ ಡಾನ್ ಆಗಿದ್ದ ಜಯರಾಜ್ ನ ಜೀವನಕಥೆಯ ಮರುಸೃಷ್ಟಿ ಹೆಡ್ ಬುಷ್. ಎಂ.ಪಿ. ಜಯರಾಜ್ ಡಾನ್ ಆಗಿದ್ದು, ಆತ ಬೆಳೆದಿದ್ದು, ಆತನ ಕ್ರೂರತನ, ಸೇಡಿನ ಜ್ವಾಲೆಗೆ ಕಾರಣ ಇತ್ಯಾದಿ ವಿಚಾರಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರದಲ್ಲಿ ತೋರಿಸಲಾಗಿದೆ.

ಅಂದಿನ ಕರ್ನಾಟಕದ ಸಿಎಂ ದೇವರಾಜ್ ಅರಸ್ (ದೇವರಾಜ್​) ಅವರು ಆಗಿನ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಅವರ ‘ಇಂದಿರಾ ಬ್ರಿಗೇಡ್’ ಕಟ್ಟುವ ನಿರ್ಧಾರಕ್ಕೆ ಮೊದಲಿಗೆ ಕರ್ನಾಟಕದಲ್ಲಿ ಬೆಂಬಲ ಸೂಚಿಸಿ ತಮ್ಮ ಅಳಿಯ ಎಂ.ಡಿ. ನಟರಾಜ್​ (ರಘು ಮುಖರ್ಜಿ) ಅವರಿಗೆ ಜವಾಬ್ದಾರಿ ವಹಿಸಿದಾಗ ಜಯರಾಜ್ ಆಳ್ವಿಕೆ ಆರಂಭ ಆಗುತ್ತದೆ. ಯುವ ಬ್ರಿಗೇಡ್​ಗೆ ನಟರಾಜ್ ಅಧ್ಯಕ್ಷರಾದಾಗ ನೇರವಾಗಿ ಎಂ.ಪಿ. ಜಯರಾಜ್ (ಧನಂಜಯ್) ಜತೆ ಕೈ ಜೋಡಿಸುತ್ತಾರೆ. ಜಯರಾಜ್ ಗೆ ಬೆಂಗಳೂರಿನ ಇನ್​ಚಾರ್ಜ್ ನೀಡಲಾಗುತ್ತದೆ. ಅಲ್ಲಿಂದ ಜಯರಾಜ್ ಆಳ್ವಿಕೆ ಆರಂಭ ಆಗುತ್ತದೆ. ರಾಜಕೀಯಕ್ಕೂ-ಭೂಗತ ಲೋಕಕ್ಕೂ ಯಾವ ರೀತಿಯ ನಂಟಿತ್ತು ಎನ್ನುವುದನ್ನು ನಿರ್ದೇಶಕ ಶೂನ್ಯ ಚೆನ್ನಾಗಿ ತೋರಿಸಿದ್ದಾರೆ.

ಧನಂಜಯ್ ಅವರು ಜಯರಾಜ್​ ಪಾತ್ರದಲ್ಲಿ ವಿಜೃಂಭಿಸಿದ್ದಾರೆ. ಡಾನ್​ ಜಯರಾಜ್ ಹೇಗಿದ್ದ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಡಾಲಿ ಧನಂಜಯ್ ನಟಿಸಿ ತೋರಿಸಿದ್ದಾರೆ.

ಜಯರಾಜ್ ಗೆಳೆಯ ಗಂಗಾ ಪಾತ್ರದಲ್ಲಿ ಲೂಸ್ ಮಾದ ಯೋಗಿ ಪರ್ಫೆಕ್ಟ್ ಆಗಿ ನಟಿಸಿದ್ದಾರೆ. ದೇವರಾಜ್ ಅರಸ್​ ಆಗಿ ದೇವರಾಜ್​, ಎಂಡಿಎನ್​ ಆಗಿ ರಘು ಮುಖರ್ಜಿ, ದೇವರಾಜ್ ಅರಸ್ ಮಗಳ ಪಾತ್ರದಲ್ಲಿ ಶ್ರುತಿ ಹರಿಹರನ್ ಉತ್ತಮ ನಟನೆ ತೋರಿದ್ದಾರೆ.

ರವಿಚಂದ್ರನ್ ತೆರೆಮೇಲೆ ಬಂದು ‘ಹೆಡ್ ಬುಷ್’ ಅರ್ಥವನ್ನು ವಿವರಿಸಿ ಹೋಗುತ್ತಾರೆ. ಕೊತ್ವಾಲ್ ಪಾತ್ರದಲ್ಲಿ ವಸಿಷ್ಠ ಸಿಂಹ ಖಡಕ್ ಆಗಿದ್ದಾರೆ. ಇಂದಿರಾ ಗಾಂಧಿ ಪಾತ್ರ ನೈಜವಾಗಿದೆ. ಜಯರಾಜ್ ಹೆಂಡತಿ ಪಾತ್ರದಲ್ಲಿ ಪಾಯಲ್ ನಟನೆ ಹಿಡಿಸುತ್ತದೆ.

ಕಥೆ ಬರೆದ ಅಗ್ನಿ ಶ್ರೀಧರ್ ಅವರ ಶ್ರಮ ಮೆಚ್ಚುಗೆಗೆ ಪಾತ್ರವಾಗುತ್ತದೆ. ಚರಣ್ ರಾಜ್ ಹಿನ್ನೆಲೆ ಸಂಗೀತ, ಸುನೋಜ್ ವೇಲಾಯುಧನ್ ಅವರ ಛಾಯಾಗ್ರಹಣ ಚಿತ್ರಕ್ಕೆ ಬಲ ತುಂಬಿದೆ.

ಇದು ಭೂಗತ ಲೋಕದ ಕಥೆ ಆಗಿದ್ದು ಮಚ್ಚುಗಳಿಗೆ, ಚಿಮ್ಮುವ ರಕ್ತಕ್ಕೆ, ಬೀಳುವ ಏಟುಗಳಿಗೆ, ಬೈಯ್ಯುವ ಕೆಟ್ಟ ಶಬ್ದಗಳಿಗೆ ಕೊರತೆ ಕಾಣುವುದಿಲ್ಲ. ಚಿತ್ರ ಆಕ್ಶನ್, ಅಂಡರ್ ವರ್ಲ್ಡ್ ಸಿನಿಮಾ ಪ್ರಿಯರಿಗೆ ಇಷ್ಟ ಆಗಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!