ಶಿವಮೊಗ್ಗ ಮೂಲದ ಆದರ್ಶ ಅಯ್ಯಂಗಾರ್, ಪ್ರಸ್ತುತ ಯು ಎಸ್ ಎ ನಿವಾಸಿ. ಈ ಮಣ್ಣಿನ ಮೇಲೆ ವಿಶೇಷ ಅಭಿಮಾನ ಹೊಂದಿರುವ ಆದರ್ಶ್ ಉತ್ತಮ ಗಾಯಕರು ಹೌದು. ಈಗಾಗಲೇ ಕೆಲವು ಆಲ್ಬಂ ವಿಡಿಯೋ ಸಾಂಗ್ ಗಳನ್ನು ಹಾಡಿ ನಿರ್ಮಾಣ ಮಾಡಿದ್ದಾರೆ. ಒಂದೇ ವೇದಿಕೆಯಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಆದರ್ಶ್ ಅಯ್ಯಂಗಾರ್ ಆಯೋಜಿಸಿದ್ದರು. ಶ್ರೀಕೃಷ್ಣ ಪ್ರೊಡಕ್ಷನ್ಸ್ ಸಂಸ್ಥೆಯ ಶುಭಾರಂಭ, ಸಾಮಾಜಿಕ ಕಳಕಳಿಯುಳ್ಳ “ಹೋಪ್” ವೀಡಿಯೋ ಸಾಂಗ್ ಬಿಡುಗಡೆ, ರಕ್ಷಿತ್ ತೀರ್ಥಹಳ್ಳಿ ಅವರ “ಕಾಡಿನ ನೆಂಟರು” ಪುಸ್ತಕ ಬಿಡುಗಡೆ ಹಾಗೂ “ತಿಮ್ಮನ ಮೊಟ್ಟೆಗಳು” ಚಿತ್ರದ ಪೋಸ್ಟರ್ ಬಿಡುಗಡೆ.
ಖ್ಯಾತ ಸಾಹಿತಿ ಹಾಗೂ ನಿರ್ದೇಶಕರಾದ ಕವಿರಾಜ್, ಚಲನಚಿತ್ರ ನಟರಾದ ಪ್ರವೀಣ್ ತೇಜ್, ಫ್ರೀಡಂ ಆಪ್ ನ ಸಿ.ಎಸ್.ಸುಧೀರ್, ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಮುಖ್ಯ ಅತಿಥಿಗಳಾಗಿ ಆಗಮಿಸಿ ಆದರ್ಶ್ ಅಯ್ಯಂಗಾರ್ ಅವರ ಈ ನೂತನ ಪ್ರಯತ್ನಗಳಿಗೆ ಶುಭ ಕೋರಿದರು. ಈ ಹಿಂದೆ ನಾನು, ರಕ್ಷಿತ್ ಹಾಗೂ ಹೇಮಂತ್ ಜೋಯಿಸ್ ಜೊತೆಗೂಡಿ ಕೆಲವು ವಿಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡಿದ್ದೆವು. ಈ ಹಾಡುಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಕೂಡ ಮಾಡಲಾಗಿತ್ತು. ಈಗ ನಾನು ಆರಂಭಿಸಿರುವ ಶ್ರೀಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಮೂಲಕ ಸದಭಿರುಚಿ ಚಿತ್ರಗಳನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ ಮೊದಲ ಚಿತ್ರವಾಗಿ “ತಿಮ್ಮನ ಮೊಟ್ಟೆಗಳು” ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಆದರ್ಶ್ ಅಯ್ಯಂಗಾರ್.
ನಾನು 2016 ರಲ್ಲಿ ಅರಣ್ಯ ಒತ್ತುವರಿ ಮತ್ತು ಒಕ್ಕಲೆಬ್ಬಿಸುವ ಕಥೆ ಹೊಂದಿದ್ದ “ಹೊಂಬಣ್ಣ” ಎಂಬ ಚಿತ್ರ ನಿರ್ದೇಶನ ಮಾಡಿದ್ದೆ. ನಂತರ ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆಯ ಕುರಿತಾದ “ಎಂಥಾ ಕಥೆ ಮಾರಾಯ” ಎಂಬ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಿದೆ. ಈಗ ಮೂರನೇ ಚಿತ್ರವಾಗಿ ನನ್ನ “ಕಾಡಿನ ನೆಂಟರು” ಕಥಾಸಂಕಲನದ ಒಂದು ಕಥೆಯಾದ “ತಿಮ್ಮನ ಮೊಟ್ಟೆಗಳು” ಚಿತ್ರವನ್ನು ನಿರ್ದೇಶಿಸಲಿದ್ದೇನೆ. ನನ್ನ ಎಲ್ಲಾ ಚಿತ್ರಗಳಲ್ಲೂ ಪಶ್ಚಿಮ ಘಟ್ಟದ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲಲಾಗುತ್ತೆ. ಇಲ್ಲಿಯೂ ಸಹ ಹೊಸ ವಿಷಯವನ್ನು ಹೇಳ ಹೊರಟಿದ್ದೇನೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುತ್ತೇವೆ ಎಂದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ತಿಳಿಸಿದರು. ಸಂಗೀತದ ಕುರಿತಾಗಿ ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್ ಮಾತನಾಡಿದರು.
Be the first to comment