ಡೊಳ್ಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ನಿರಾಣಿ

ಪವನ್ ಒಡೆಯರ್ ನಿರ್ಮಾಣದ ‘ಡೊಳ್ಳು’ ಸಿನಿಮಾವನ್ನು ಸಚಿವ ಮುರುಗೇಶ್‌ ನಿರಾಣಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ವೀಕ್ಷಿಸಿ ಫಿದಾ ಆಗಿದ್ದಾರೆ.

ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಚಿತ್ರತಂಡ ಸೆಲೆಬ್ರಿಟಿಗಳಿಗಾಗಿ ಸ್ಪೆಷಲ್ ಶೋ ಆಯೋಜಿಸಿತ್ತು. ಅದರಂತೆ ಸಿನಿಮಾ ವೀಕ್ಷಣೆ ಮಾಡಿದ ಸಚಿವರು ಸಿನಿಮಾ ಬಗ್ಗೆ  ಮೆಚ್ಚುಗೆ ಸೂಚಿಸಿದರು.

ಸಚಿವ ಮುರುಗೇಶ್ ನಿರಾಣಿ, ಡೊಳ್ಳು ಸಿನಿಮಾ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದೆ. ಇದು ಇಡೀ ಕುಟುಂಬಸ್ಥರು ನೋಡುವ ಸಿನಿಮಾ. ಚಿತ್ರ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಸಿನಿಮಾ ರಾಜ್ಯಾದ್ಯಂತ ಎಲ್ಲರೂ ನೋಡಬೇಕಾದ ಸಿನಿಮಾ. ಸರ್ಕಾರ ಹಾಗೂ ಆರೂವರೆ ಕೋಟಿ ಜನರ ಪರವಾಗಿ ಇಡೀ ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಇದು ಇಲ್ಲಿಗೆ ನಿಲ್ಲಬಾರದು. ಈ ರೀತಿ ಸಿನಿಮಾಗಳು ಮತ್ತಷ್ಟು ಬರಲಿ ಎಂದು ತಿಳಿಸಿದರು.

ಬಿ.ವೈ.ವಿಜಯೇಂದ್ರ ಮಾತನಾಡಿ, ಸಾಗರ್ ಪುರಾಣಿಕ್ ಹಾಗೂ ಪವನ್ ಒಡೆಯರ್ ನೇತೃತ್ವದಲ್ಲಿ ಮೂಡಿ ಬಂದಿರುವ ಡೊಳ್ಳು ಸಿನಿಮಾ ಅದ್ಭುತ ಚಿತ್ರ. ಸಿನಿಮಾ ನೋಡುತ್ತಾ ಸಮಯ ಕಳೆದು ಹೋಗಿದ್ದು ಗೊತ್ತಾಗಲಿಲ್ಲ. ಈ ಚಿತ್ರಕ್ಕೆ 17 ಅಂತರಾಷ್ಟ್ರೀಯ ಪ್ರಶಸ್ತಿಗಳು ಬಂದಿರುವುದು, ಭಾರತದಲ್ಲಿ ಎರಡು ಪ್ರಶಸ್ತಿ ಸಿಕ್ಕಿರೋದು ನಮ್ಮ ಕನ್ನಡದ ಹೆಮ್ಮೆ. ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ವಲಸೆ ಹೋಗುವ ಸಂದರ್ಭದಲ್ಲಿ ಗ್ರಾಮೀಣ ಸೊಗಡನ್ನು ಮರೆಯುತ್ತಿದ್ದೇವೆ. ನಮ್ಮ ಕಲೆ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಈ ಚಿತ್ರದ ಮೂಲಕ ಅದರ ಮಹತ್ವವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ನಮ್ಮ ಸಂಸ್ಕೃತಿ, ಕಲೆ ಬಗ್ಗೆ ಮೆಲುಕು ಹಾಕುವಂತೆ ಈ ಸಿನಿಮಾ ಮಾಡುತ್ತದೆ. ಈ ಚಿತ್ರ ಯಶಸ್ವಿಯಾಗಲಿ. ಜೊತೆ ಜೊತೆಗೆ ಯುವ ಪೀಳಿಗೆಗೆ ಉತ್ತಮ ಸಂದೇಶ ದೊರೆಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ಚಿತ್ರವನ್ನು ನಿರ್ದೆಶನ ಮಾಡಿದ್ದು, ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಜೊತೆಗೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್​ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪವನದ ಒಡೆಯರ್ ಮೂವೀಸ್ ಬ್ಯಾನರ್ ನಡಿ ಪವನ್ ಒಡೆಯರ್ ಚಿತ್ರ ನಿರ್ಮಾಣ ಮಾಡಿದ್ದು, ಇದೇ 26ರಿಂದ ಚಿತ್ರ ತೆರೆಗೆ ಬರ್ತಿದೆ.

‘ಡೊಳ್ಳು’ ಸಿನಿಮಾವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗಷ್ಟೇ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

————-

Be the first to comment

Leave a Reply

Your email address will not be published. Required fields are marked *

Translate »
error: Content is protected !!