ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ವಿರುದ್ಧ ಟ್ವಿಟರ್ ನಲ್ಲಿ ಬಹಿಷ್ಕಾರದ ಟ್ರೆಂಡ್ ಶುರುವಾಗಿದ್ದು, ಚಿತ್ರತಂಡಕ್ಕೆ ಆತಂಕ ಕಾಡಿದೆ.
ಇದು ಮೂಲತಃ ಟಾಲಿವುಡ್ ಸಿನಿಮಾವಾದರೂ ಬಹಿಷ್ಕಾರಕ್ಕೆ ಕಾರಣ, ಲೈಗರ್ ಸಿನಿಮಾವನ್ನು ಹಿಂದಿಯಲ್ಲಿ ಕರಣ್ ಜೋಹರ್ ಬಿಡುಗಡೆ ಮಾಡುತ್ತಿರುವುದು ಆಗಿದೆ. ಕರಣ್ ಜೋಹರ್ ನೇತೃತ್ವದ ಧರ್ಮ ಪ್ರೊಡಕ್ಷನ್ಸ್ ಚಿತ್ರ ಬಿಡುಗಡೆ ಮಾಡುತ್ತಿರುವುದರಿಂದ ನೆಟ್ಟಿಗರು ಬಾಯ್ಕಾಟ್ ಲೈಗರ್ ಸಿನಿಮಾ ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ.
ಆಗಸ್ಟ್ 25 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಈ ಟ್ರೆಂಡ್ ಬಾಕ್ಸ್ ಆಫೀಸ್ ಗಳಿಕೆ ಮೇಲೆ ಪರಿಣಾಮ ಬೀರುವ ಭೀತಿ ಎದುರಾಗಿದೆ. ಬಾಲಿವುಡ್ ನ ಸಾಲು ಸಾಲು ಸಿನಿಮಾಗಳು ಬಾಯ್ಕಾಟ್ ಟ್ರೆಂಡ್ ಗೊಳಗಾಗಿ ಸೋಲುತ್ತಿರುವುದು ಆತಂಕ ಮೂಡಿಸಿದೆ.
ಇತ್ತೀಚೆಗೆ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ವಿರುದ್ಧ ನೆಟ್ಟಿಗರಿಂದ ಬಹಿಷ್ಕಾರದ ಅಭಿಯಾನ ಶುರುವಾಗಿದೆ.
2023 ರಲ್ಲಿ ಬಿಡುಗಡೆಯಾಗಲಿರುವ ಪಠಾಣ್ ಸಿನಿಮಾ ಬಹಿಷ್ಕರಿಸುವಂತೆ ನೆಟ್ಟಿಗರು ಕರೆ ಶುರು ಮಾಡಿದ್ದಾರೆ. ಈ ಹಿಂದೆ ಶಾರುಖ್ ಖಾನ್ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದಿದ್ದರು. ಇದನ್ನು ಉಲ್ಲೇಖಿಸಿ ಶಾರುಖ್ ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಲಾಗುತ್ತಿದೆ.
ಬಾಲಿವುಡ್ ಸಿನಿಮಾಗಳು ಇತ್ತೀಚೆಗೆ ಬಹಿಷ್ಕಾರದ ಅಭಿಯಾನದಿಂದ ನೆಲಕಚ್ಚುತ್ತಿದೆ. ಇದಕ್ಕೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಮತ್ತು ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಸಿನಿಮಾಗಳು ಉದಾಹರಣೆ ಆಗಿವೆ.
ಹಿಂದೂ ದೇವರಿಗೆ ಅವಮಾನ ಮಾಡಿದ್ದಕ್ಕೆ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ, ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಸಿನಿಮಾ ವಿರುದ್ಧ ಬಹಿಷ್ಕಾರದ ಅಭಿಯಾನ ಮಾಡಲಾಗಿತ್ತು. ಲಾಲ್ ಸಿಂಗ್ ಛಡ್ಡಾ, ರಕ್ಷಾ ಬಂಧನ್ ಸಿನಿಮಾಗಳು ಬಹಿಷ್ಕಾರದ ಅಭಿಯಾನದ ಬಿಸಿಯಿಂದಾಗಿ ಬಾಕ್ಸ್ ಆಫೀಸ್ ನಲ್ಲಿ ಸೋತು ಹೋಗಿವೆ.
____
Be the first to comment