ದರ್ಶನ್ ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಭರತ್ ವಿಷ್ಣುಕಾಂತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಹೊಸ ವಿವಾದ ಉಂಟಾಗಿದೆ.
2020 ರಲ್ಲಿ ಧ್ರುವನ್ ಅವರನ್ನು ನಾಯಕ ನಟನನ್ನಾಗಿಸಿಕೊಂಡು ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾ ಪ್ರಾರಂಭಿಸಿದೆ. ಕೆಲವು ದಿನಗಳ ಬಳಿಕ ದರ್ಶನ್ ಅವರು ಕರೆ ಮಾಡಿ ಬೇರೆ ಕತೆಯೊಂದನ್ನು ಸೂಚಿಸಿ ಆ ಕತೆಯನ್ನು ಸಿನಿಮಾ ಮಾಡುವಂತೆ ಹೇಳಿದರು. ದರ್ಶನ್ ಹಾಗೂ ನಟ ಧ್ರುವನ್ ಸೇರಿ ನಿರ್ದೇಶಕರನ್ನೂ ಬದಲಿಸಿದರು. ನಾನೂ ಸಹ ಒಪ್ಪಿಕೊಂಡೆ ಆದರೆ ಕಾರಣಾಂತರಗಳಿಂದ ಸಿನಿಮಾದ ಚಿತ್ರೀಕರಣ ತಡವಾಯಿತು. ಆಗ ದರ್ಶನ್ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
ಆಗಸ್ಟ್ ತಿಂಗಳಲ್ಲಿ ನನಗೆ ಕರೆ ಮಾಡಿದ ದರ್ಶನ್, ಧ್ರುವನ್ ಜೀವನ ನೀನು ಹಾಳು ಮಾಡುತ್ತಿದ್ದೀಯ. ನೀನು ಹೀಗೆ ಸಿನಿಮಾ ತಡ ಮಾಡಿದರೆ ಅವನ ಕೆರಿಯರ್ ಯಾರು ನೋಡ್ತಾರೆ. ಎಲ್ಲಾ ನೋಡ್ಕೊಂಡು ತಾನೇ ಮಾಡ್ಬೇಕು. ಸಿನಿಮಾ ಅನೌನ್ಸ್ ಮಾಡಿದೀಯ ಅದನ್ನು ಮುಗಿಸಬೇಕು. ಇಲ್ಲ ಅಂದ್ರೆ ನೀನು ಇರಲ್ಲ. ಏನಾದ್ರೂ ಮಾಡಬೇಕು ಅಂದ್ರೆ ಹೇಳಿಬಿಟ್ಟೇ ನಾನು ಮಾಡೋದು. ನೀನು ರೆಡಿ ಇರು. ಎಲ್ಲಾದರೂ ಕಂಡಾಗ ಏನಪ್ಪ ಅಂತ ಮಾತನಾಡೋ ಥರ ಇಟ್ಕೋ, ಇಲ್ಲ ಅಂದ್ರೆ ನೀನೇ ಕಾಣ್ದೇ ಇರೋ ಥರ ಮಾಡಿ ಬಿಡ್ತೀನಿ. ಇದನ್ನ ವಾರ್ನಿಂಗ್ ಅಂತ ಬೇಕಾದರೂ ಅನ್ಕೊ’ ಎಂದು ದರ್ಶನ್ ಹೇಳಿದ್ದರು ಎಂದು ದೂರಿದ್ದಾರೆ.
ನಾನು ಲಾಕ್‌ಡೌನ್ ಮುಗಿದ ಕೂಡಲೇ ಚಿತ್ರೀಕರಣ ಸ್ಟಾರ್ಟ್ ಮಾಡ್ತೀನಿ ಎಂದು 10 ದಿನ ಶೂಟಿಂಗ್ ಮಾಡಿದೆ ಎಂದು ಭರತ್ ಅವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ಮಾಡಿಕೊಳ್ಳಲಾಗಿದೆ. ದೂರಿನ ಸಂಬಂಧ ನಾಯಕ ನಟ ಧ್ರುವನ್, ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಸಿನಿಮಾದ ನಿರ್ದೇಶಕ ಆಂಥೋನಿ,ಕ್ಯಾಮೆರಾಮನ್ ಠಾಣೆಗೆ ಹೋಗಿ ಹೇಳಿಕೆ ನೀಡಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ದರ್ಶನ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ಹರಿದಾಡುತ್ತಿದ್ದು ಚರ್ಚೆಗೆ ಕಾರಣವಾಗಿದೆ.
____
Be the first to comment