ರವಿಶಂಕರ್‌ ಗುರೂಜಿ ಸಮ್ಮುಖದಲ್ಲಿ ದರ್ಶನ್‌ D56 ಚಿತ್ರಕ್ಕೆ ಮುಹೂರ್ತ

“ಚಾಲೆಂಜಿಂಗ್ ಸ್ಟಾರ್” ದರ್ಶನ್ ಅಭಿನಯದಲ್ಲಿ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ “ಡಿ56” ಚಿತ್ರಕ್ಕೆ ವರಮಹಾಲಕ್ಷ್ಮೀ ಹಬ್ಬದಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಅವರ ಆರ್ಟ್‌ ಆಫ್‌ ಲಿವೀಂಗ್‌ ಆಶ್ರಮದಲ್ಲಿ ಚಿತ್ರದ ಮುಹೂರ್ತ ಸಮಾರಂಭದ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ರಾಕ್‌ಲೈನ್ ವೆಂಕಟೇಶ್ ಪತ್ನಿ ಪುಷ್ಪ ಕುಮಾರಿ ಕ್ಲಾಪ್ ಮಾಡಿದರೆ, ಶ್ರೀ ರವಿಶಂಕರ್ ಗುರೂಜಿ ಕ್ಯಾಮರಾ ಸ್ವಿಚ್ ಆನ್ ಮಾಡಿದರು.

ಡಿ56 ಚಿತ್ರವನ್ನು ‘ರಾಬರ್ಟ್’ ಖ್ಯಾತಿಯ ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ಕಥೆ-ಚಿತ್ರಕಥೆ ಸಹ ಅವರದ್ದೇ. ‘ರಾಬರ್ಟ್’ ಚಿತ್ರದಲ್ಲಿ ಕೆಲಸ ಮಾಡಿದ್ದ ಬಹುತೇಕರು ಇಲ್ಲೂ ಮುಂದುವರೆಯುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ನಿರ್ಮಾಪಕ ರಾಮು ಮತ್ತು “ಕನಸಿನ ರಾಣಿ” ಮಾಲಾಶ್ರೀ ದಂಪತಿಯ ಮಗಳು ರಾಧನಾ ರಾಮ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

‘ಒಳ್ಳೆಯ ಕಥೆ ಸಿಗುವವರೆಗೂ ಯಾರಿಗೂ ಚಿತ್ರ ಮಾಡುವುದಿಲ್ಲ. ತರುಣ್ ಒಂದೊಳ್ಳೆಯ ಕಥೆ ಹೇಳಿದರು. ದರ್ಶನ್ ಅವರಿಗೆ ಇಷ್ಟು ಚಿತ್ರಗಳಲ್ಲಿ ಈ ತರಹದ ಚಿತ್ರ ಮತ್ತು ಪಾತ್ರ ಎರಡೂ ಹೊಸದು. ಆಗಸ್ಟ್ 16ರಂದು ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದು ರಾಕ್‌ಲೈನ್‌ ವೆಂಕಟೇಶ್‌ ಹೇಳಿದರು.

‘ಇವತ್ತಿನಿಂದ ಡಿ56 ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿದೆ. ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಘೋಷಿಸಲಾಗುತ್ತದೆ. ರಾಬರ್ಟ್ ತಂಡದ ಬಹಳಷ್ಟು ಜನ ಇಲ್ಲಿ ಮುಂದುವರಿಯುತ್ತಿದ್ದಾರೆ. ಈ ಚಿತ್ರದ ಹೆಚ್ಚಿನ ವಿಷಯವನ್ನು ಸದ್ಯದಲ್ಲೇ ತಿಳಿಸುತ್ತೇವೆ’ ಎಂದರು ನಟ ದರ್ಶನ್.

ಈ ಚಿತ್ರ ನೋಡಿದವರಿಗೆ ಹೆಮ್ಮೆ ಆಗುವುದು ಖಂಡಿತಾ ಎನ್ನುವ ನಿರ್ದೇಶಕ ತರುಣ್ ಸುಧೀರ್, ‘ಚಿಕ್ಕವಯಸ್ಸಿನಲ್ಲಿ ಪೋಸ್ಟರ್ ಗಳಲ್ಲಿ ರಾಕ್ ಲೈನ್ ಪ್ರೊಡಕ್ಷನ್ಸ್ ಅಂತ ನೋಡಿಯೇ ಎಷ್ಟೋ ಚಿತ್ರಗಳಿಗೆ ಹೋಗಿದ್ದೇನೆ. ಆ ಬ್ಯಾನರ್ನ ಚಿತ್ರಗಳು ಚೆನ್ನಾಗಿರುತ್ತದೆ ಎಂಬ ನಂಬಿಕೆಯ ಮೇಲೆ ಚಿತ್ರಗಳಿಗೆ ಹೋಗುತ್ತಿದ್ದೆವು. ಈಗ ಅದೇ ಸಂಸ್ಥೆಯಲ್ಲಿ ಚಿತ್ರ ನಿರ್ದೇಶಿಸುತ್ತಿರುವುದು ದೊಡ್ಡ ಜವಾಬ್ದಾರಿ. ಹಾಗಾಗಿ, ತುಂಬಾ ಮುತುವರ್ಜಿ ವಹಿಸಿ, ಬೇರೆ ತರಹದ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ದರ್ಶನ್ ಅವರ ಪಾತ್ರ, ಚಿತ್ರದ ಹಿನ್ನೆಲೆ ಎಲ್ಲವೂ ವಿಭಿನ್ನವಾಗಿರುತ್ತದೆ. ಚಿತ್ರ ನೋಡಿದವರಿಗೆ ಹೆಮ್ಮೆ ಆಗುವುದು ಖಂಡಿತಾ’ ಎಂದರು.

ರಾಧಾನಾ ಎಂಟ್ರಿ ಕುರಿತು ಮಾತನಾಡುವ ಅವರ ತಾಯಿ ಮಾಲಾಶ್ರೀ, ‘ನನಗೆ ಬದುಕು ಕೊಟ್ಟ ಚಿತ್ರರಂಗಕ್ಕೆ ಈಗ ನನ್ನ ಮಗಳು ಸಹ ಕಾಲಿಡುತ್ತಿದ್ದಾಳೆ. ನನಗೆ ಎಷ್ಟು ಪ್ರೀತಿ ತೋರಿಸಿದ್ದೀರೋ, ನನ್ನ ಮಗಳಿಗೆ ಅದಕ್ಕಿಂತ ಹೆಚ್ಚು ಪ್ರೀತಿ ತೋರಿಸಿ ಎಂದು ಕೇಳಿಕೊಳ್ಳುತ್ತೇನೆ. ರಾಕ್ ಲೈನ್ ವೆಂಕಟೇಶ್ ಅವರು ನನ್ನ ಸಿನಿಮಾ ಮೂಲಕ ಚಿತ್ರ ನಿರ್ಮಾಣ ಶುರು ಮಾಡಿದರು. ಈಗ ನನ್ನ ಮಗಳು ಅವರ ನಿರ್ಮಾಣದ ಚಿತ್ರದ ಮೂಲಕ ಚಿತ್ರರಂಗಕ್ಕೆ ಚಿತ್ರಜೀವನ ಪ್ರಾರಂಭಿಸುತ್ತಿದ್ದಾಳೆ. ಒಂದೊಳ್ಳೆಯ ತಂಡದಿಂದ ಅವಳು ಚಿತ್ರರಂಗಕ್ಕೆ ಬರುತ್ತಿದ್ದಾಳೆ ಎಂಬ ಖುಷಿ ಇದೆ.

ಅವಳು 14ನೇ ವಯಸ್ಸಿನಲ್ಲಿದ್ದಾಗಲೇ ಚಿತ್ರರಂಗಕ್ಕೆ ಬರಬೇಕು, ಅಭಿನಯಿಸಬೇಕು ಎಂದು ಆಸೆ ಪಟ್ಟಿದ್ದಳು. ಮುಂಬೈನಲ್ಲಿ ನಟನೆ, ಡ್ಯಾನ್ಸ್ ತರಬೇತಿ ಪಡೆದಿದ್ದಾಳೆ. ನಾಳೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ, ಪ್ರೇಕ್ಷಕರು ನನ್ನ ಮತ್ತು ಅವಳ ನಡುವೆ ಹೋಲಿಕೆ ಮಾಡುವುದು ಸಹಜ. ಆದರೆ, ಅವಳು ತನ್ನ ಹೆಸರಿನಿಂದ ಗುರುತಿಸಿಕೊಳ್ಳಬೇಕೇ ಹೊರತು, ನನ್ನ ಹೆಸರಿನಿಂದ ಗುರುತಿಸಿಕೊಳ್ಳಬಾರದು ಎಂಬುದು ನನ್ನ ಆಸೆ’ ಎಂದರು ಮಾಲಾಶ್ರೀ.

Be the first to comment

Leave a Reply

Your email address will not be published. Required fields are marked *

Translate »
error: Content is protected !!