ವೀರಲೋಕ ಪ್ರಕಾಶನದಿಂದ ಹತ್ತು ಪುಸ್ತಕ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ಸಾಹಿತ್ಯ ಕ್ಷೇತ್ರಕ್ಕೂ ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಮೊನ್ನೆಯಷ್ಟೇ ಸಾವಣ್ಣ ಪ್ರಕಾಶನದ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ್’ ರಿಲೀಸ್ ಮಾಡಿದ್ದರು. ಇದೀಗ ರಮೇಶ್ ಅರವಿಂದ್ ಬರೆದ ಆರ್ಟ್ ಆಫ್ ಸಕ್ಸಸ್ ಕೃತಿಯ ಜೊತೆಗೆ ಇತರ ಒಂಬತ್ತು ಜನ ಲೇಖಕರ ಕೃತಿಯನ್ನು ಸುದೀಪ್ ನಿನ್ನೆ ಬಿಡುಗಡೆ ಮಾಡಿದ್ದಾರೆ.

ಪುಸ್ತಕ ಕ್ಷೇತ್ರದಲ್ಲೊಂದು ವಿಭಿನ್ನ ಬಗೆಯ ಪ್ರಯತ್ನಕ್ಕೆ ವೀರಕಪುತ್ರ ಶ್ರೀನಿವಾಸ್ ಮುನ್ನುಡಿ ಬರೆದಿದ್ದಾರೆ. ಕಾಫಿ ಶಾಪ್‌, ಹೋಟೆಲ್, ರೆಸ್ಟೋರೆಂಟ್, ಔಷಧ ಮಳಿಗೆ, ಆಸ್ಪತ್ರೆ, ಮಾಲ್‌, ಕಾರ್ಪೊರೇಟ್‌ ಕಂಪನಿಗಳ ಕಚೇರಿಗಳು ಸೇರಿದಂತೆ ವಿವಿಧೆಡೆ ಕನ್ನಡ ಪುಸ್ತಕಗಳು ದೊರೆಯುವಂತಹ ಅವಕಾಶವನ್ನು ಶ್ರೀನಿವಾಸ್ ಕಲ್ಪಿಸಿದ್ದಾರೆ. ವೀರಕಪುತ್ರ ಶ್ರೀನಿವಾಸ್ ವೀರಲೋಕ ಪ್ರಕಾಶನ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಕನ್ನಡ ಪುಸ್ತಕಗಳ ಓದುಗರಿಗೆ ಉತ್ತಮ ವೇದಿಕೆ ಒದಗಿಸಿ, ಓದುಗರ ಸಂಖ್ಯೆ ವೃದ್ಧಿಸಲು ಸಜ್ಜಾದ್ದಾರೆ.

ವೀರಲೋಕ ಪ್ರಕಾಶನ ಹೊರತಂದಿರುವ ಹತ್ತು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಪುಸ್ತಕಗಳು ಜ್ಞಾನದ ಕೀಲಿಕೈ ಎಂಬ ಹೆಸರಿನಡಿ ನಡೆದ ಕಾರ್ಯಕ್ರಮಕ್ಕೆ ಕನ್ನಡ ಪುಸ್ತಕಗಳ ರಾಯಭಾರಿಯಾಗಿರುವ ನಟ ರಮೇಶ್ ಅರವಿಂದ್‌ ಕಾರ್ಯಕ್ರಮ ಉದ್ಘಾಟಿಸಿದರು. ನಟ ಕಿಚ್ಚ ಸುದೀಪ್ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ರಮೇಶ್ ಅರವಿಂದ್, ಫೌಡ್ರಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತು.  ಆ ಪಾತ್ರಕ್ಕಾಗಿ ತಲೆ ಕೂದಲು ತೆಗೆದಿದ್ದೆ. ಹೀಗಾಗಿ ಶಾಲೆಗೆ ಹೋಗುವ ಬದಲು ಗ್ರಂಥಾಲಯಕ್ಕೆ ತೆರಳಿ ಪುಸ್ತಕ ಓದಲು ಶುರುಮಾಡಿದೆ. ನಂತ್ರ ಅದು ಹವ್ಯಾಸವಾಯಿತು. ಹಲವು ಪುಸ್ತಕಗಳನ್ನು ಓದಿದ ಪರಿಣಾಮ ನಾನು ಈಗ ಪುಸ್ತಕ ಬರೆಯಲು ಶುರು ಮಾಡಿದ್ದೇನೆ ಎಂದರು.

ಸುದೀಪ್ ಮಾತಾನಾಡಿ, ನಾನು ಜಾಸ್ತಿ ಓದದೆ ಇರುವುದು ತುಂಬಾ ಒಳ್ಳೆಯದಾಗಿದೆ. ಏಕಂದ್ರೆ ಇದರಿಂದ ಹೆಚ್ಚು ಪುಸ್ತಕ ಓದಲು ಸಾಧ್ಯವಾಗದೇ ಇದೀಗ ಹಲವು ಪುಸ್ತಕಗಳನ್ನು ಒಮ್ಮೆಲೇ ಬಿಡುಗಡೆ ಮಾಡಿ ಜೀವನದಲ್ಲಿ ಒಳ್ಳೆ ಕೆಲಸ ಮಾಡಿದೆ. ಎಲ್ಲಾ ಬರಹ ಹತ್ತಿರವಿಟ್ಟುಕೊಂಡಿದ್ದೇನೆ ಎಂದು ತಿಳಿಸಿದರು. ವೀರ ಲೋಕದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್, ‘ಕನ್ನಡ ಪುಸ್ತಕ ಎಲ್ಲಿ ಬೇಕಾದರೂ ಸಿಗುವಂತಾಗಲು ಮೊದಲ ಹಂತದಲ್ಲಿ 1 ಸಾವಿರ ಪುಸ್ತಕಗಳ ಸ್ಟ್ಯಾಂಡ್‌ಗಳನ್ನು ಬೆಂಗಳೂರಿನ ಮಾಲ್, ಅಂಗಡಿ ಮಳಿಗೆಗಳಲ್ಲಿ ಇರಿಸಲಾಗುವುದು. ಸ್ಥಳದಲ್ಲೇ ಖರೀದಿಗೆ ಅವಕಾಶ ಇದೆ’ ಎಂದರು. ‘ಕನ್ನಡ ಪುಸ್ತಕಗಳನ್ನು ಪರಿಚಯಿಸಿ ಮಾರಾಟ ಮಾಡಲು ಕಾಲ್ ಸೆಂಟರ್ ಸ್ಥಾಪಿಸಲಾಗಿದೆ. ನಮ್ಮ ಬಳಿ 11 ಲಕ್ಷ ಓದುಗರ ಮಾಹಿತಿ ಇದೆ. ಅವರನ್ನು ಸಂಪರ್ಕಿಸಿ ಪುಸ್ತಕ ಪರಿಚಯ, ಮಾರಾಟ ಮಾಡುತ್ತೇವೆ’ ಎಂದರು.

ಕೈಹಿಡಿದು ನೀ ನಡೆಸು ತಂದೆ(ವಿಶ್ವೇಶ್ವರ ಭಟ್), ಅವರು ಇವರು ದೇವರು(ಜೋಗಿ), ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್(ಗಣೇಶ್ ಕಾಸರಗೋಡು), ವಿಶ್ವ ಸುಂದರಿ(ಕುಂ. ವೀರಭದ್ರಪ್ಪ), ಸೋಲೆಂಬ ಗೆಲುವು(ದೀಪಾ ಹಿರೇಗುತ್ತಿ), ಮನಿ ಮನಿ ಎಕಾನಮಿ(ರಂಗಸ್ವಾಮಿ ಮೂಕನಹಳ್ಳಿ), ಆರ್ಟ್ ಆಫ್ ಸಕ್ಸಸ್( ರಮೇಶ್ ಅರವಿಂದ್), ನಿಮಗೆಷ್ಟು ಹಣ ಬೇಕು?(ಅನಂತ ಹುದೆಂಗಜೆ), ಒಳ್ಳೆಯ ಬದುಕಿನ ಸೂತ್ರಗಳು(ರವಿಕೃಷ್ಣಾ ರೆಡ್ಡಿ) ಕೃತಿಗಳು ಬಿಡುಗಡೆಯಾದವು.

Be the first to comment

Leave a Reply

Your email address will not be published. Required fields are marked *

Translate »
error: Content is protected !!