Kabza Movie: 7 ಭಾಷೆಗಳಲ್ಲಿ ಧೂಳೆಬ್ಬಿಸಲಿದೆ ಆರ್ ಚಂದ್ರು ನಿರ್ದೆಶನದ ‘ಕಬ್ಜ’ ಸಿನಿಮಾ; ಭರದಿಂದ ಸಾಗುತ್ತಿದೆ ಡಬ್ಬಿಂಗ್​ ಕೆಲಸ

 ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ 7 ಭಾಷೆಗಳಲ್ಲಿ ಡಬ್ಬಿಂಗ್ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಈಗ ಪ್ಯಾನ್​ ಇಂಡಿಯಾ ಸಿನಿಮಾಗಳ ಹವಾ ಜೋರಾಗಿದೆ. ಕನ್ನಡದಿಂದ ಹಲವು ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಆಗಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಆ ಪೈಕಿ ಉಪೇಂದ್ರ  ಅಭಿನಯದ ‘ಕಬ್ಜ’ ಸಿನಿಮಾ ಕೂಡ ಪ್ರಮುಖವಾಗಿದೆ. ಈ ಸಿನಿಮಾಗೆ ಆರ್​. ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಸೇರಿ ಒಟ್ಟು 7 ಭಾಷೆಗಳಲ್ಲಿ ‘ಕಬ್ಜ’ ಬಿಡುಗಡೆ ಆಗಲಿದೆ. ಅದಕ್ಕಾಗಿ ಈಗಾಗಲೇ ಏಳೂ ಭಾಷೆಗಳಲ್ಲಿ ಡಬ್ಬಿಂಗ್​ ಕಾರ್ಯ ಆರಂಭಗೊಂಡಿದೆ. ಈ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಅಪ್​ಡೇಟ್​ ನೀಡಿದೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ಚಿತ್ರಮಂದಿರದಲ್ಲಿ ‘ಕಬ್ಜ’ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಹಾಗಾದರೆ ಈ ಸಿನಿಮಾದ ಕೆಲಸಗಳು ಯಾವ ಹಂತದಲ್ಲಿವೆ? ಇಲ್ಲಿದೆ ಮಾಹಿತಿ..

‘ಕಬ್ಜ’ ಸಿನಿಮಾದ ಕೆಲಸಗಳು ತಡವಾಗುತ್ತಿವೆ ಎಂಬ ಬಗ್ಗೆ ಅಭಿಮಾನಿಗಳಿಗೆ ಕೊಂಚ ಬೇಸರ ಇರಬಹುದು. ಆದರೆ ನಿರ್ದೇಶಕ ಆರ್​. ಚಂದ್ರು ಅವರು ಎಲ್ಲ ಕೆಲಸಗಳಿಗೂ ಹೆಚ್ಚು ಸಮಯ ತೆಗೆದುಕೊಂಡು ಎಲ್ಲವನ್ನೂ ಅಚ್ಚುಕಟ್ಟಾಗಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ಸಹಜವಾಗಿಯೇ ಈ ಸಿನಿಮಾದ ಮೇಕಿಂಗ್​ಗೆ ಸಮಯ ಹಿಡಿಯುತ್ತಿದೆ. ಬೃಹತ್​ ಸೆಟ್​ಗಳನ್ನು ಹಾಕಿ ಚಿತ್ರಿಸಲಾಗುತ್ತಿದೆ. ಖುಷಿ ವಿಚಾರ ಏನೆಂದರೆ ಒಂದು ಹಾಡಿನ ಶೂಟಿಂಗ್​ ಹೊರತುಪಡಿಸಿ ಇಡೀ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದೆ.

ಒಂದೆಡೆ ಶೂಟಿಂಗ್​ ಬಹುತೇಕ ಮುಗಿದಿದ್ದು, ಇನ್ನೊಂದೆಡೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ ಹಾಗೂ ಓರಿಯಾ ಭಾಷೆಗಳಲ್ಲಿ ಡಬ್ಬಿಂಗ್ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಉಪೇಂದ್ರ ಮತ್ತು ಆರ್​. ಚಂದ್ರು ಕಾಂಬಿನೇಷನ್​ನಲ್ಲಿ ಈ ಹಿಂದೆ ಮೂಡಿಬಂದಿದ್ದ ‘ಐ ಲವ್​ ಯೂ’ ಸಿನಿಮಾ ಹಿಟ್​ ಆಗಿತ್ತು. ಈಗ ‘ಕಬ್ಜ’ ಮೂಲಕ ಮತ್ತೊಂದು ಗೆಲುವು ಪಡೆಯಲು ಚಿತ್ರತಂಡ ಪ್ರಯತ್ನಿಸುತ್ತಿದೆ.

ರವಿ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉಪೇಂದ್ರ ಜೊತೆ ನಾಯಕಿಯಾಗಿ ಶ್ರೀಯಾ ಶರಣ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!