ಸ್ಮೈಲ್ ಶ್ರೀನು ನಿರ್ದೇಶನದ ‘ಓ ಮೈ ಲವ್’ ದಿನದಿಂದ ದಿನಕ್ಕೆ ಕ್ರೇಜ಼್ ಹೆಚ್ಚುತ್ತಲೇ ಇದೆ. ಅಕ್ಷಿತ್ ಶಶಿಕುಮಾರ್ ಹಾಗೂ ಕೀರ್ತಿ ಕಲ್ಕೆರಿ ಪ್ರಮುಖ ಭೂಮಿಕೆಯಲ್ಲಿರುವ ಈ ಸಿನಿಮಾಕ್ಕೆ ಚಿತ್ರರಂಗದ ಘಟಾನುಘಟಿಗಳೆಲ್ಲಾ ಶುಭ ಹಾರೈಸಿರುವುದು ‘ಓ ಮೈ ಲವ್’ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಮೊದಲ ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಅದರ ಬೆನ್ನಲ್ಲೇ ಹರಿಬಿಟ್ಟ 4ಕೆ ಟೀಸರ್ ವೀಕ್ಷಿಸಿದ ತೆಲುಗು ಚಿತ್ರರಂಗದ ಸಿನಿಮಾಬ್ರಹ್ಮ ಕೆ.ರಾಘವೇಂದ್ರರಾವ್ ‘ಓ ಮೈ ಲವ್’ ಕುರಿತು ಮೆಚ್ಚುಗೆಯ ಮಾತನಾಡುವುದರ ಜತೆಗೆ ನಿರ್ದೇಶಕ ಸ್ಮೈಲ್ ಶ್ರೀನು ಮೇಕಿಂಗ್ ಹಾಗೂ ಶ್ರಮಕ್ಕೆ ಶಹಬ್ಬಾಸ್ ಹೇಳಿ ಬೆನ್ನು ತಟ್ಟಿದ್ದರು.
ಇದೀಗ ಮಾಜಿ ಪೊಲೀಸ್ ಆಯುಕ್ತರಾದ, ಐಪಿಎಸ್ ಅಧಿಕಾರಿ ಮತ್ತು ಎಪಿಪಿ ಮುಖಂಡರಾದ ಭಾಸ್ಕರ್ ರಾವ್ ಸಹ ಚಿತ್ರದ ಒಂದು ಹಾಡನ್ನೂ ಬಿಡುಗಡೆ ಮಾಡಿ ಚಿತ್ರದ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ.
ಓ ಮೈ ಲವ್ ಚಿತ್ರದ ‘ನಿನ್ನ ಡ್ಯಾಡಿ ನಂಗೆ ಯಾವಾಗಿಂದ ಮಾವ ಆಗೋದು…’ ಎಂಬ ಹಾಡನ್ನು ಬಿಡುಗಡೆ ಮಾಡಿದ ಭಾಸ್ಕರ್ ರಾವ್, ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಕನ್ನಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬಂದು ಸೂಪರ್ ಹಿಟ್ ಆಗಿವೆ. ಸದ್ಯ ಚಂದನವನದಲ್ಲಿ ಕುಟುಂಬ ಸಮೇತರಾಗಿ ಕುಳಿತು ನೋಡುವ ಸಿನಿಮಾಗಳ ಅವಶ್ಯಕತೆಯಿದೆ. ಅದನ್ನು ‘ಓ ಮೈ ಲವ್’ ನೀಗಿಸುವ ಎಲ್ಲಾ ಲಕ್ಷಣಗಳಿವೆ. ಚಿತ್ರದ ಹಾಡು ಮತ್ತು ಟೀಸರ್ ಈಗಾಗಲೇ ಹಿಟ್ ಲಿಸ್ಟ್ ಸೇರಿವೆ. ಈ ಹಾಡು ಸಹ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ. ಸಿನಿಮಾ ಕೂಡ ದೊಡ್ಡ ಮೈಲಿಗಲ್ಲು ಸಾಧಿಸಲಿ’ ಎಂದು ಶುಭ ಕೋರಿದ್ದಾರೆ.
ಸದ್ಯ ಸ್ಯಾಂಡಲ್’ವುಡ್’ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾಗಳ ಪೈಕಿ ‘ಓ ಮೈ ಲವ್’ ಮುಂಚೂಣಿಯಲ್ಲಿದೆ. ಕೆ.ಜಿ.ಎಫ್ ಬಳಿಕ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವಲ್ಲಿ ಯಶಸ್ವಿಯಾಗಲಿದೆ ಎಂಬ ಭರವಸೆ ಮೂಡಿಸಿದೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಸಿನಿಮಾಕ್ಕೆ ಕಥೆ ಬರೆದು ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಿ.ರಾಮಾಂಜಿನಿ ನಿರ್ಮಿಸಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಡೈರೆಕ್ಷನ್ ಮಾಡಿದ್ದಾರೆ ಸ್ಮೈಲ್ ಶ್ರೀನು. ಚಿತ್ರದ ಎಲ್ಲಾ ಹಾಡುಗಳಿಗೆ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ನೃತ್ಯ ನಿರ್ದೇಶನ ಹಾಡುಗಳಿಗಿದೆ. ಎಸ್.ನಾರಾಯಣ್, ಸಾಧುಕೋಕಿಲ, ದೇವಗಿಲ್, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್ ಹಾಗೂ ಸಂಗೀತಾ, ದೀಪಿಕಾ ಆರಾಧ್ಯ, ಪೃಥ್ವಿರಾಜ್ , ಆನಂದ್, ಶಿಲ್ಪಾ ರವಿ, ಭಾಗ್ಯಶ್ರೀ, ರಾಮ್ ಕುಮಾರ್ ಸೇರಿದಂತೆ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ.
Be the first to comment