ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಿನಿಮಾದಲ್ಲಿ ಶಿವಣ್ಣ!

ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ದೇಶಕ ಸಚಿನ್ ರವಿ ಮುಂದಿನ ಸಿನಿಮಾ ಹೇಗಿರಲಿದೆ? ಯಾವ ಸ್ಟಾರ್‌ಗೆ ಆಕ್ಷನ್ ಕಟ್ ಹೇಳ್ತಾರೆ? ಯಾವ ಶೈಲಿಯ ಸಿನಿಮಾ ಮಾಡಲಿದ್ದಾರೆ? ಅನ್ನುವ ಪ್ರಶ್ನೆ ಚಿತ್ರರಸಿಕರ ಮನದಲ್ಲಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಚಿನ್ ಅವರ ಮುಂದಿನ ಸಿನಿಮಾವನ್ನು ಶಿವಣ್ಣನಿಗೆ ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಸಚಿನ್‌ ಶಿವಣ್ಣನ ಜತೆಗಿರುವ ಫೋಟೋ ಶೇರ್‌ ಮಾಡಿಕೊಂಡು, ಕಾತರದಿಂದ್ದೇನೆ ಎಂದಿದ್ದಾರೆ.

ಅಶ್ವತ್ಥಾಮನಾಗಲಿದ್ದಾರೆ ಶಿವಣ್ಣ

 

ಸಚಿನ್ ರವಿ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾದಲ್ಲಿ ಶಿವಣ್ಣ ಮಹಾಭಾರತದ ಅಶ್ವತ್ಥಾಮನಾಗಿ ಬಣ್ಣ ಹಚ್ಚಲಿದ್ದು, ಇದೊಂದು ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಅಮರತ್ವ ಪಡೆದಿರುವ ಅಶ್ವತ್ಥಾಮನ ಸುತ್ತ ಸಾಗುವ ಇಡೀ ಕಥೆಯಲ್ಲಿ ಶಿವಣ್ಣ ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೂ ಕೌಟುಂಬಿಕ ಮತ್ತು ಕಮರ್ಷಿಯಲ್‌ ರೀತಿಯ ಮಾಸ್‌ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿರುವ ಶಿವಣ್ಣ, ಸೂಪರ್‌ ಹೀರೋ ಅವತಾರದಲ್ಲಿ ಪ್ರತ್ಯಕ್ಷರಾಗಿಲ್ಲ. ಇದೀಗ ಆ ಕಾಲವೂ ಸನ್ನಿಹಿತವಾಗಿದೆ.

 

ನಿರ್ದೇಶನದ ಜೊತೆಗೆ ನಿರ್ಮಾಣಕ್ಕಿಳಿದ ಸಚಿನ್

 

ಅವನೇ ಶ್ರೀಮನ್ನಾರಾತಣ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶನ ಮಾಡಿದ್ದ ಸಚಿನ್, ಈ ಸಿನಿಮಾಗೆ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ತಮ್ಮದೇ ಹೋಮ್ ಬ್ಯಾನರ್ ಜೊತೆಗೆ ಕಾರ್ಪೊರೇಟ್ ಕಂಪೆನಿಯೊಂದರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದಲ್ಲಿಯೇ ಈ ಹೋಮ್‌ ಬ್ಯಾನರ್‌ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕರು ನೀಡಲಿದ್ದಾರೆ.

 

ಕನ್ನಡದ ಮಟ್ಟಿಗೆ ಸೂಪರ್ ಹೀರೋ ಪರಿಕಲ್ಪನೆಯ ಮೊದಲ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ರೀತಿಯಲ್ಲಿ ಎದುರಾಗಲಿದ್ದಾರೆ. ವಿಎಫ್‌ಎಕ್ಸ್‌ಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸದ್ಯ ಸಿನಿಮಾ ಬಗ್ಗೆ ಇಷ್ಟು ಗುಟ್ಟುಬಿಟ್ಟು ಕೊಟ್ಟಿರುವ ಸಚಿನ್, ಮುಂದಿನ ದಿನಗಳಲ್ಲಿ ಉಳಿದ ಕಲಾವಿದರು ಹಾಗೂ ತಂತ್ರಜ್ಞಾನ ತಂಡವನ್ನು ಪರಿಚಯಿಸಲಿದ್ದಾರೆ. ಬರುವ ಸೆಪ್ಟಂಬರ್ ನಿಂದ ಶೂಟಿಂಗ್ ಶುರುವಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!