ಧ್ರುವ ಹೊಸ ಚಿತ್ರಕ್ಕೆ ಮುಹೂರ್ತ

ಪೊಗರು ಖ್ಯಾತಿಯ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದ ಮುಹೂರ್ತ ಮೈಸೂರಿನ ಶ್ರೀಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಭಾನುವಾರ ನಡೆಯಿತು.

ಭಕ್ತಾದಿಗಳ ಜೊತೆ ಅಭಿಮಾನಿಗಳ ಸಮ್ಮುಖದಲ್ಲಿ ಹೂವಿನಿಂದ ಅಲಂಕೃತವಾಗಿದ್ದ ಶಕ್ತಿದೇವತೆಯ ರಥವನ್ನು ನಾಯಕ ಧ್ರುವಸರ್ಜಾ, ನಿರ್ದೇಶಕ ಪ್ರೇಮ್, ನಿರ್ಮಾಪಕ ವೆಂಕಟ್ ಕೋನಂಕಿ ಅವರು ಎಳೆಯುತ್ತಿರುವ ದೃಶ್ಯವನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.

ಇದೇ ಮೊದಲ ಬಾರಿಗೆ ಜೊತೆಯಾಗಿರುವ ಇಬ್ಬರು ಸ್ಟಾರ್‌ಗಳ ಬಿಗ್ ಪ್ರಾಜೆಕ್ಟ್ ಗೆ ನಿಶಾವೆಂಕಟ್ ಕೋನಂಕಿ ಅವರ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಸಂಸ್ಥೆಯ ಪ್ರೊಮೋಟರ್ ಸುಪ್ರೀತ್ ಅವರು ವಹಿಸಿಕೊಂಡಿದ್ದರು. ರೈಡರ್, ಸಖತ್, ಬೈಟು ಲವ್ ನಂತರ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕನ್ನಡದಲ್ಲಿ ನಿರ್ಮಿಸುತ್ತಿರುವ ನಾಲ್ಕನೇ ಚಿತ್ರವಿದು.

ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್, ಬೆಂಗಳೂರು ಭೂಗತಲೋಕದಲ್ಲಿ ನಡೆದ ಕೆಲವು ರಿಯಲ್ ಇನ್‌ಸಿಡೆಂಟ್‌ಗಳನ್ನು ಇಟ್ಟುಕೊಂಡು ಮಾಡುತ್ತಿರುವ ರೌಡಿಸಂ ಹಿನ್ನೆಲೆಯ ಚಿತ್ರವಿದು. 1968ರಿಂದ 1978ರವರೆಗಿನ ಸಮಯದಲ್ಲಿ ಬೆಂಗಳೂರಿನಲ್ಲಿ ರೌಡಿಸಂ ಹೇಗಿತ್ತು ಎಂಬುದನ್ನು ರಕ್ತಚರಿತ್ರೆಯೊಂದರ ಮೂಲಕ ಹೇಳಹೊರಟಿದ್ದೇನೆ. ಇದು ಬರೀ ರೌಡಿಸಂ ಕಥೆಯಲ್ಲ. ಲವ್, ಅ್ಯಕ್ಷನ್, ಸೆಂಟಿಮೆಂಟ್ ಎಲ್ಲದರ ಮಿಳಿತವಾಗಿರಲಿದೆ. ಚಿತ್ರದ ನಾಯಕಿ ಪಾತ್ರಕ್ಕೆ ಇನ್ನೂ ಆಯ್ಕೆಯಾಗಿಲ್ಲ. ಎಲ್ಲವನ್ನೂ ಫೈನಲ್ ಮಾಡಿಕೊಂಡು ಮುಂದಿನ ತಿಂಗಳು ಬೆಂಗಳೂರು ಅರಮನೆ ಮುಂಭಾಗದಲ್ಲಿ ಚಿತ್ರದ ಟೈಟಲ್ ನ್ನು ಅದ್ದೂರಿಯಾಗಿ ಅನೌನ್ಸ್ ಮಾಡುವ ಯೋಜನೆಯಿದೆ ಎಂದರು.

ಈ ಚಿತ್ರದಲ್ಲಿ ಧ್ರುವ ಅವರ ಲುಕ್, ಗೆಟಪ್ ಚೇಂಜ್ ಆಗಿರಲಿದೆ. ಅವರು ಒಳ್ಳೆಯ ಡಾನ್ಸರ್. ಅದಕ್ಕಾಗಿ ವಿಶೇಷವಾದ ಹಾಡುಗಳನ್ನು ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ನಾಯಕ ನಟ ಧ್ರುವ ಸರ್ಜಾ ಮಾತನಾಡಿ, ಪ್ರೇಮ್ ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ. ಟೈಟಲ್ ಇನ್ನೂ ಫೈನಲ್ ಆಗಿಲ್ಲ. ನಾನು ಥೆ ಕೇಳಿ ಎಕ್ಸೈಟ್ ಆದೆ. ತುಂಬಾನೇ ಪ್ರಾಮಿಸಿಂಗ್ ಆಗಿದೆ. ಎಪ್ಪತ್ತರ ದಶಕದ ಫ್ಯಾಮಿಲಿ ಲವ್ ಜೊತೆಗೆ ರೌಡಿಸಂ ಕಥೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ ಎಂದು ಹೇಳಿದರು.

ಚಿತ್ರದ ನಿರ್ಮಾಪಕ ವೆಂಕಟ್ ಕೋನಂಕಿ ಅವರು ಮಾತನಾಡಿ, ಈ ಕಥೆ ತುಂಬಾ ಚೆನ್ನಾಗಿದೆ. ಎಲ್ಲಾ ಕಡೆಗೂ ಹೊಂದಿಕೊಳ್ಳುವ ಯೂನಿವರ್ಸಲ್ ಸಬ್ಜೆಕ್ಟ್. ಬಜೆಟ್ ಬಗ್ಗೆ ಯಾವುದೇ ಲಿಮಿಟ್ ಹಾಕಿಕೊಂಡಿಲ್ಲ. ಕಥೆಗೆ ಏನು ಬೇಕೋ ಅದನ್ನೆಲ್ಲ ಕೊಡಲೇಬೇಕು. ಚಿತ್ರದಲ್ಲಿ 70ರ ದಶಕದ ದೃಶ್ಯಗಳನ್ನು ರೀಕ್ರಿಯೇಟ್ ಮಾಡಬೇಕಿದೆ. ಹಾಗಾಗಿ ಸೆಟ್‌ಗೆ ಹೆಚ್ಚು ಮಹತ್ವವಿದ್ದು ಹೆಚ್ಚು ಬಂಡವಾಳ ಕೇಳುತ್ತದೆ. ಜೊತೆಗೆ ಪ್ರೇಮ್ ಒಳ್ಳೇ ಹಾಡುಗಳನ್ನು ಮಾಡಿಕೊಂಡಿದ್ದಾರೆ ಎಂದರು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!