ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದ ದುನಿಯಾ ವಿಜಯ್, “ಸಲಗ” ಮೂಲಕ ನಿರ್ದೇಶಕರಾಗಿಯೂ ಯಶಸ್ವಿಯಾದರು. ಇದೀಗ ವಿಜಯ್ ಅವರ ಎರಡನೇ ನಿರ್ದೇಶನದ “ಭೀಮ” ಚಿತ್ರದ ಮುಹೂರ್ತ ಸಮಾರಂಭ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು.
“ಸಲಗ” ನಂತರ “ಭೀಮ” ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಯುವ ಹಾಗೂ ಉತ್ಸಾಹಿ ನಿರ್ಮಾಪಕರಾದ ಜಗದೀಶ್ ಹಾಗೂ ಕೃಷ್ಣ ಸಾರ್ಥಕ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಂಡ ಕೆಲವು ಘಟನೆಗಳನ್ನು ಆಧರಿಸಿ ಕಥೆ ಸಿದ್ದಪಡಿಸಿ ಕೊಂಡಿದ್ದೀನಿ. ಚಿತ್ರಕ್ಕೆ ಶೀರ್ಷಿಕೆ ಏನಿಡಬೇಕೆಂದು ಬಹಳ ದಿನಗಳ ಚರ್ಚೆ ನಡೆದ ನಂತರ “ಭೀಮ” ಎಂಬ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೀವಿ.
ಶೀರ್ಷಿಕೆ ಕೊಡಿಸಿದ ಜಗದೀಶ್ ಅವರಿಗೆ ಧನ್ಯವಾದ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ನಿರ್ದೇಶನದ ಜೊತೆಗೆ ನಾನು ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದೀನಿ.”ಜಯಮ್ಮನ ಮಗ” ಚಿತ್ರದಲ್ಲಿ ನನ್ನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಲ್ಯಾಣಿ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಬ್ಲ್ಯಾಕ್ ಡ್ರ್ಯಾಗನ್ ಮಂಜು ಅವರು ಸೇರಿದಂತೆ ಸಾಕಷ್ಟು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯ ಆಯ್ಕೆ ನಡೆಯುತ್ತಿದೆ. ಇಂದಿನಿಂದ ಚಿತ್ರೀಕರಣ ಆರಂಭಿಸುತ್ತಿದ್ದೇನೆ. ನನ್ನ “ಸಲಗ” ಚಿತ್ರದ ಮುಹೂರ್ತ ಸಮಾರಂಭ ಸಹ ಈ ದೇವಸ್ಥಾನದಲ್ಲಿ ನಡೆದಿತ್ತು. ಎರಡನೇ ಚಿತ್ರದ ಮುಹೂರ್ತ ಇಲ್ಲೇ ನಡೆಯಬೇಕೆಂದು ಆಸೆಯಿತ್ತು. ಇಂತಹ ದೇವಸ್ಥಾನ ಪರಿಚಯಿಸಿದ ಕೆ.ಪಿ.ಶ್ರೀಕಾಂತ್ ಅವರಿಗೆ ಧನ್ಯವಾದ.
ಶ್ರೀನಗರ ಕಿಟ್ಟಿ, ಧನಂಜಯ ಸೇರಿದಂತೆ ಅನೇಕ ಚಿತ್ರರಂಗದ ಗೆಳೆಯರು ಆಗಮಿಸಿರುವುದು ಖುಷಿ ತಂದಿದೆ ಎಂದರು ನಾಯಕ ಹಾಗೂ ನಿರ್ದೇಶಕ ದುನಿಯಾ ವಿಜಯ್. “ಜಯಮ್ಮನ ಮಗ” ಚಿತ್ರದಲ್ಲಿ ನನಗೆ ತಾಯಿಯ ಪಾತ್ರ ನೀಡಿದ್ದರು. ಈ ಚಿತ್ರದಲ್ಲೂ ನಾನು ಅವರ ತಾಯಿ. ಆ ಚಿತ್ರದಲ್ಲಿ ಸೌಮ್ಯ ಸ್ವಭಾವದ ತಾಯಿಯಾಗಿ ಕಾಣಿಸಿಕೊಂಡಿದ್ದೆ. ಇದರಲ್ಲಿ ಸ್ವಲ್ಪ ರೌದ್ರ ಸ್ಭಭಾವದವಳು ಎಂದು ಹಿರಿಯ ನಟಿ ಕಲ್ಯಾಣಿ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಹಾಗೆಯೇ ಸಿನಿಮಾ ಆರಂಭವಾದ ಬಗ್ಗೆ ನಿರ್ಮಾಪಕ ಕೃಷ್ಣ ಸಾರ್ಥಕ್ ಮಾತನಾಡಿದರು.
“ಭೀಮ” ಶೀರ್ಷಿಕೆ ನೀಡಿದ್ದ ನಟಿ ಮಾಲಾಶ್ರೀ ಅವರಿಗೆ ನಿರ್ಮಾಪಕ ಜಗದೀಶ್ ಧನ್ಯವಾದ ತಿಳಿಸಿದರು. ಸಂಭಾಷಣೆ ಬಗ್ಗೆ ಮಾಸ್ತಿ, ಸಂಗೀತದ ಕುರಿತು ಚರಣ್ ರಾಜ್ ಮಾತನಾಡಿದರು. ಒಟ್ಟಾರೆ ತಾರಾ ಹಾಗೂ ತಂತ್ರಜ್ಞ ಬಳಗದವರಿಗೆ ಬಂದಂತಹ ಅತಿಥಿ ಗಣ್ಯರು ಚಿತ್ರ ಯಶಸ್ವಿಯಾಗಲಿ ಎಂದು ಶುಭವನ್ನ ಹಾರೈಸಿದರು.
Be the first to comment