“ಓ ಮೈ ಲವ್ ” ಚಿತ್ರದ ಮೊದಲ ಹಾಡಿಗೆ ಭಾರಿ ಮೆಚ್ಚುಗೆ

ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್, ಕೀರ್ತಿ ಕಲ್ಕೆರೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‌’ಓ ಮೈ ಲವ್’ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಸ್ಮೈಲ್ ಶ್ರೀನು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡನ್ನು ರಿಯಲ್ ಸ್ಟಾರ್‌ ಉಪೇಂದ್ರ ಇತ್ತೀಚೆಗೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಆ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ಕೋಟ್ಯಂತರ ಹಿಟ್ಸ್ ದಾಖಲಿಸಿ ಜನಪ್ರಿಯವಾಗಿದೆ.

‌‌ ‌‌‌‌ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿರುವ ಈ ಹಾಡಿಗೆ ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ‘ಏನಾಯ್ತೋ ಕಾಣೆ…’ ಎಂಬ ಸಾಹಿತ್ಯವಿರುವ ಈ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಯೂ ಟ್ಯೂಬ್ ಸೇರಿದಂತೆ ಫೇಸ್‌ಬುಕ್‌, ಇನ್ಸಟಾಗ್ರಾಮ್, ಮೋಜ್, ಟಕಾ ಟಕ್ ಹಾಗೂ ಶೇರ್ ಚಾಟ್ ಸೇರಿದಂತೆ ಅನೇಕ ಸೋಶಿಯಲ್ ಮೀಡಿಯಾ ಆ್ಯಪ್’ಗಳಲ್ಲಿ ಓ ಮೈ ಲವ್ ಚಿತ್ರದ ಹಾಡು ಸಖತ್ ಸೌಂಡು ಮಾಡುತ್ತಿದೆ.

ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನಲ್’ ಮೂಲಕ ಬಿಡುಗಡೆಯಾಗಿರುವ ಈ ಹಾಡು ರಿಲೀಸಾದ ಕೆಲವೇ ದಿನಗಳಲ್ಲಿ ಕೋಟ್ಯಂತರ ಹಿಟ್ಸ್ ದಾಖಲಿಸಿರುವುದು ವಿಶೇಷ. ಅಲ್ಲದೇ ಪ್ರಿ-ವೆಡ್ಡಿಂಗ್ ಶೂಟ್, ಮದುವೆ ಮೊದಲಾದ ಶುಭ ಸಮಾರಂಭಗಳಲ್ಲಿ ಈ ಹಾಡನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಮತ್ತೊಂದು ವಿಶೇಷ. ಇನ್ನು ಈ ಹಾಡಿಗೆ ಕೊರಿಯೋಗ್ರಾಫರ್ ಮುರಳಿ ಅವರು ನೃತ್ಯ ಸಂಯೋಜನೆ ಮಾಡಿದ್ದು, ತುಂಬಾನೇ ಕಲರ್’ಫುಲ್ ಆಗಿ ಮೂಡಿಬಂದಿದೆ.

ತೆರೆಯ ಮೇಲೆ ಹಾಡು ಬಂದಾಗ ಪ್ರೇಕ್ಷಕರು ಖಂಡಿತಾ ಎಂಜಾಯ್ ಮಾಡಲಿದ್ದಾರೆ ಎಂಬುದು ನಿರ್ದೇಶಕರ ಅನಿಸಿಕೆ. ನಿರ್ಮಾಪಕ ರಾಮಾಂಜಿನಿ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಜಿಸಿಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದೆ. ನಿರ್ದೇಶಕ ಸ್ಮೈಲ್ ಶ್ರೀನು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಟಾಲಿವಿಡ್ ಖಳನಟ ದೇವ್ ಗಿಲ್, ಹಿರಿಯ ನಟ ಎಸ್.ನಾರಾಯಣ್, ಸಾಧುಕೋಕಿಲ, ಪವಿತ್ರಾ ಲೋಕೇಶ್, ಟೆನ್ನಿಸ್ ಕೃಷ್ಣ ಮೊದಲಾದವರು ಓ ಮೈ ಲವ್ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಓ ಮೈ ಲವ್ ಚಿತ್ರದ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!