ಕೆವಿಎನ್ ಪ್ರೊಡಕ್ಷನ್ಸ್ ನಲ್ಲಿ ಧ್ರುವ ಸರ್ಜಾ-ಪ್ರೇಮ್ ಕಾಂಬಿನೇಶನ್ ನ ಚಿತ್ರದ ಮುಹೂರ್ತ ಏಪ್ರಿಲ್ 24 ಕ್ಕೆ ನಡೆಯಲಿದೆ.
‘ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ’ ಎನ್ನುವ ಕ್ಯಾಪ್ಶನ್ನೊಂದಿಗೆ ಪ್ರೇಮ್ ಫೋಟೋ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ದೊಡ್ಡ ಕಮಾನಿನ ಮೇಲೆ 1970 ಎಂದು ಬರೆಯಲಾಗಿದೆ. ವ್ಯಕ್ತಿಯೋರ್ವ ಬೆನ್ನು ತೋರಿಸಿ ನಿಂತಿದ್ದು, ಕೈಯಲ್ಲಿ ಗನ್ ಹಿಡಿದಿದ್ದಾನೆ. ಈ ಕಥೆ ರೆಟ್ರೋ ಶೈಲಿಯಲ್ಲಿ ಸಾಗಲಿದೆ ಎನ್ನುವ ಊಹೆ ಮಾಡಲಾಗಿದೆ.
ಸಿನಿಮಾದ ಮುಹೂರ್ತವನ್ನು ಅಭಿಮಾನಿಗಳ ಜತೆ ನೆರವೇರಿಸಲು ಪ್ರೇಮ್ ನಿರ್ಧರಿಸಿದ್ದಾರೆ. ‘ಏಪ್ರಿಲ್ 24ರಂದು ಬೆಳಿಗ್ಗೆ 9.30ಕ್ಕೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಡೆಯೋ ಮುಹೂರ್ತಕ್ಕೆ ನೀವೇ ಮುಖ್ಯ ಅತಿಥಿ. ಬನ್ನಿ ಒಟ್ಟಿಗೆ ಹಬ್ಬ ಮಾಡೋಣ. ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ, ಹರಸಿ ಹಾರೈಸಿ’ ಎಂದು ಕೋರಿದ್ದಾರೆ. ಮೈಸೂರಿನ ಚಾಮುಂಡಿ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿಸಲು ಪ್ರೇಮ್ ಮುಂದಾಗಿದ್ದಾರೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದು, ಈ ಪ್ರೊಡಕ್ಷನ್ ಹೌಸ್ನ ನಾಲ್ಕನೇ ಸಿನಿಮಾ ಇದಾಗಿದೆ.
ನೈಜ ಘಟನೆಗಳನ್ನು ಆಧರಿಸಿದ ಚಿತ್ರವು 1970 ರ ದಶಕದಲ್ಲಿ ನಡೆಯುತ್ತದೆ. ಇದು ಬೆಂಗಳೂರಿನಲ್ಲಿ ನಡೆಯುವ ಕಥೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಪ್ರಾಜೆಕ್ಟ್ ಕುರಿತು ಹೆಚ್ಚಿನ ವಿವರಗಳನ್ನು ಮುಹೂರ್ತದ ದಿನಾಂಕದಂದು ನಿರೀಕ್ಷಿಸಲಾಗಿದೆ.
ಸದ್ಯ ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಮಾರ್ಟಿನ್’ ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುವ ನಟನೆಯ ಮೊದಲ ಸಿನಿಮಾ ‘ಅದ್ದೂರಿ’ಗೆ ಆಯಕ್ಷನ್-ಕಟ್ ಹೇಳಿದ್ದ ಅರ್ಜುನ್ ಈಗ ಮತ್ತೊಮ್ಮೆ ಧ್ರುವ ಜತೆ ಕೈ ಜೋಡಿಸಿದ್ದಾರೆ. ಚಿತ್ರ ಸೆಪ್ಟೆಂಬರ್ 30ರಂದು ಬಿಡುಗಡೆ ಆಗಲಿದೆ.
___
Be the first to comment