ಸೆಂಚುರಿ ತಾರೆಯ ಜೊತೆ ನೂರೆಂಟು ಮಾತು.

ಯುದ್ಧವೆಂದಾಗ ಟಗರು,
ಗೆದ್ದು ನಿಂತಾಗ ಲೀಡರು
ಸೆಂಚುರಿ ತಾರೆಯ ಜೊತೆ ನೂರೆಂಟು ಮಾತು.

ಇತ್ತೀಚೆಗಷ್ಟೇ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ 55ನೆಯ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಅದಕ್ಕೆ ಪ್ರಮುಖ ಕಾರಣ ತಾಯಿಯನ್ನು ಕಳೆದುಕೊಂಡ ದುಃಖವೂ ಹೌದು. ಒಟ್ಟು ಅಂದಿನ ಜನ್ಮದಿನ, ಅಳಿಸಲಾಗದ ಅಪ್ಪ-ಅಮ್ಮನ ನೆನಪುಗಳು, ಚಿತ್ರೀಕರಣ ನಡೆಯುತ್ತಿರುವ ಚಿತ್ರಗಳು.. ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಶಿವಣ್ಣ ಇಲ್ಲಿ ಮನಸ್ಸು ತೆರೆದು ಮಾತನಾಡಿದ್ದಾರೆ.

ಈ ಬಾರಿಯ ಜನ್ಮದಿನಾಚರಣೆ ಹೇಗೆ ಅನಿಸಿತು?
ನನಗೆ ಆಚರಿಸಬೇಕೆಂಬ ಹಂಬಲ ಇರಲಿಲ್ಲ. ಆದರೆ ನಮಗಿಂತ ಅಭಿಮಾನಿಗಳಿಗೆ ಉತ್ಸಾಹ ಹೆಚ್ಚು. ಅಭಿಮಾನಿಗಳನ್ನು ದೇವರು ಎನ್ನುವ ಅಪ್ಪಾಜಿಯ ಮನಸ್ಸಿಗೆ ಯಾವತ್ತೂ ನೋವು ಮಾಡಲು ನಾನು ಬಯಸುವುದಿಲ್ಲ. ಅಲ್ಲದೆ ಮನೆಗೆ ಬರುವವರನ್ನು ತಡೆಯುವುದು ಮತ್ತು ಬಂದವರನ್ನು ನಿರಾಶೆಗೊಳಿಸಿ ಕಳಿಸುವುದು ಅಪ್ಪಾಜಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಸಿಂಪಲ್ ಆಗಿ ಜನ್ಮದಿನಾಚರಣೆ ಮಾಡಲು ಒಪ್ಪಿದೆ. ಸಾಕಷ್ಟು ಅಭಿಮಾನಿಗಳು ಬಂದಿದ್ದರು.

ಅಮ್ಮ ಇದ್ದಿದ್ದರೆ ಬರ್ತ್‍ಡೇ ರೀತಿಯೇ ಬೇರೆ ಇರುತ್ತಿತ್ತೇನೋ?
ಅಮ್ಮನನ್ನು ಬರ್ತ್‍ಡೇ ಎಂಬ ಕಾರಣಕ್ಕಾಗಿ ಮಾತ್ರ ನಾನು ನೆನಪಿಸಿಕೊಳ್ಳುತ್ತಿಲ್ಲ. ಎಲ್ಲರಂತೆ ನಡೆಯುವಾಗ ಎಡವಿದರೂ ‘ಅಮ’್ಮ ಎಂಬ ಪದದ ಮೂಲಕ, ಸದಾ ನೆನಪಾಗಿ ಜೊತೆಗಿರುತ್ತಾರೆ. ನನಗೆ ಮೊದಲು ಶುಭ ಕೋರುವಾಕೆ ನನ್ನ ಪತ್ನಿ ಗೀತಾ. ಅವಳಲ್ಲಿಯೂ ನಾನು ಅಮ್ಮನನ್ನು ಕಾಣಲು ಬಯಸುತ್ತೇನೆ. ಅಪ್ಪಾಜಿಯಾಗಲೀ, ಅಮ್ಮನಾಗಲೀ ನಮ್ಮಿಂದ ತುಂಬ ದೂರ ಹೋಗಿಲ್ಲ, ಇಲ್ಲೇ ಎಲ್ಲೋ ಇದ್ದುಕೊಂಡು ನಮ್ಮನ್ನೆಲ್ಲ ನೋಡುತ್ತಿದ್ದಾರೆ ಎಂದುಕೊಳ್ಳುತ್ತೇನೆ. ಹಾಗಾಗಿ ತಪ್ಪೇನೂ ನಡೆಯದಂತೆ ಸದಾ ಜಾಗೃತವಾಗಿರಲು ಸಾಧ್ಯ ಎಂದು ನನ್ನ ಭಾವನೆ. ಯಾಕೆಂದರೆ ಇವತ್ತು ಮಲಗಿದ್ರೆ ನಾಳೆ ಬೆಳಿಗ್ಗೆ ಜೀವಂತ ಇರುತ್ತೇನಾ ಎನ್ನುವುದಕ್ಕೆ ನನಗೂ ಗ್ಯಾರಂಟಿಯಿಲ್ಲ! ಒಂದಲ್ಲ ಒಂದು ದಿನ ನಮ್ಮ ಟರ್ಮ್ ಕೂಡ ಬರುತ್ತದೆ ಎಂದು ಒಪ್ಪಲೇಬೇಕಾದಾಗ ಸಾವನ್ನು ನೆನೆದು ಕೊರಗುವುದೇ ಜೀವನ ಆಗಬಾರದು.

ಚಿತ್ರೋದ್ಯಮ ಅವರನ್ನು ಹೇಗೆ ನೆನಪಿಸಿಕೊಳ್ಳಬೇಕು ಎಂದು ಬಯಸುತ್ತೀರಿ?
ಮಗನಾಗಿ ನಾನು ಬಯಸುವುದಕ್ಕಿಂತ ಚಿತ್ರೋದ್ಯಮದವರಾಗಿ ಏನು ಬಯಸುತ್ತಿದ್ದಾರೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಅಪ್ಪಾಜಿಯನ್ನು ಓರ್ವ ಕಲಾವಿದನಾಗಿ ಮತ್ತು ಅಮ್ಮನನ್ನು ಉತ್ತಮ ಚಿತ್ರಗಳ ನಿರ್ಮಾಪಕಿಯಾಗಿ ಎಲ್ಲರೂ ಸದಾ ನೆನಪಿಸುತ್ತಾರೆ ಎಂಬ ನಂಬಿಕೆ ನನಗಿದೆ. ಅಂಥ ತಂದೆ ತಾಯಿಗಳನ್ನು ಪಡೆದಿದ್ದಕ್ಕೆ ನಾನು ಧನ್ಯ. ಅಪ್ಪಾಜಿಯ ವೃತ್ತಿ ಮತ್ತು ಅಮ್ಮನ ಮೈಬಣ್ಣ ನನ್ನೊಂದಿಗೆ ಇದೆ. ಅವರು ಯಾವತ್ತೂ ಏನನ್ನೂ ನಿರೀಕ್ಷೆ ಮಾಡುವುದನ್ನು ಕಲಿಸಿಲ್ಲ. ಹಾಗಾಗಿ ಇಂದಿಗೂ ಒಂದು ವೇಳೆ ದಾರಿಯಲ್ಲಿ ನನ್ನ ಕಾರು ಕೆಟ್ಟರೆ, ಆಟೋ ಮಾಡಿಕೊಂಡು ಮನೆಗೆ ಹೋಗೋಕೆ ತಯಾರಿರುತ್ತೇನೆ. ಮತ್ತೊಂದು ಕಾರಿಗೆ ಕಾಯುವ ಜಾಯಮಾನ ನನ್ನದಲ್ಲ. ಆದರೆ ಅದಕ್ಕೂ ಮುನ್ನ ಮನೆಗೆ ಡ್ರಾಪ್ ನೀಡುವಂಥ ಬಳಗವಿದೆ ಎನ್ನುವುದೇ ಖುಷಿ.
ನಿಮ್ಮ ಕೆಲವೊಂದು ಚಿತ್ರಗಳಲ್ಲಿ ಅಥವಾ ಹಾಡುಗಳಲ್ಲಿ ನಿಮ್ಮನ್ನು ಪಾತ್ರದಿಂದಾಚೆ, ರಾಜಕುಮಾರ್ ಪುತ್ರನಾಗಿ ತೋರಿಸುವುದು ಎಷ್ಟು ಸರಿ?
ನನ್ನನ್ನು ಇಂದು ನಟನಾಗಿ ಪ್ರೀತಿಸುವ ಅಭಿಮಾನಿಗಳು ರಾಜಕುಮಾರ್ ಪುತ್ರನಾಗಿಯೂ ಕಾಣುತ್ತಾರೆ. ಅಂಥ ಅಭಿಮಾನಿಗಳಿಗಾಗಿ ನಾನು ಶಿವರಾಜಕುಮಾರ್ ಆಗಿಯೂ ಕಾಣಿಸಿಕೊಳ್ಳುವುದಕ್ಕೆ ಸಂತೋಷ ಪಡುತ್ತೇನೆ. ಹಂಸಲೇಖಾರಂಥ ಹಿರಿಯರು ಪ್ರೀತಿಯಿಂದ ‘ಶಿವರಾಜಕುಮಾರು ಕಿಸ್ಸಿಗೆ ಢಮಾರು..’ ಎಂದು ಗೀತೆ ಬರೆದಾಗ ಜನತೆ ಅಷ್ಟೇ ಅಭಿಮಾನದಿಂದ ಸ್ವೀಕರಿಸಿದ್ದಾರೆ. ‘ಜೋಗಿ’ಯಲ್ಲಿ ‘ಶಿವರಾಜ್ ಕುಮಾರ್‍ಗೆ ಚಾಡಿ ಹೇಳ್ತೀನೋ’ ಎನ್ನುವ ಸಾಲುಗಳು ಹಿಟ್ ಆಗಿವೆ. ‘ಕಡ್ಡಿಪುಡಿ’ಯಲ್ಲಿ ರಾಜಕುಮಾರ್ ರಸ್ತೆ ತೋರಿಸಿದಾಗ ಸಿಳ್ಳೆ ಬೀಳುತ್ತವೆ. ಇದನ್ನೆಲ್ಲ ನಮ್ಮ ಇಂಡಸ್ಟ್ರಿಯಷ್ಟೇ ಅಲ್ಲ, ಹೊರಗಿನ ಮಂದಿಯೂ ‘ನಲ್ಲಾ ಯೂಸ್ ಪಣ್ಣಿರ್‍ಕಾಂಗ’ ಎಂದು ಮೆಚ್ಚಿದ್ದಾರೆ. ಕಮರ್ಷಿಯಲ್ ಚಿತ್ರಗಳಲ್ಲಿ ಇಂಥ ಪ್ರಯೋಗಗಳನ್ನು ಯಶಸ್ವಿಯಾಗಿ ವರ್ಕೌಟ್ ಮಾಡಲು ಸಾಧ್ಯವಾದರೆ ಹೆಮ್ಮೆ.

ನಿಮ್ಮ ಹೊಸ ಚಿತ್ರಗಳ ಬಗ್ಗೆ ಹೇಳಿ
ಈ ವರ್ಷ ನನಗೆ ವಿಭಿನ್ನವಾದ ಚಿತ್ರಗಳೇ ದೊರಕಿವೆ. ‘ಬಂಗಾರ ಸನ್‍ಆಫ್ ಬಂಗಾರದ ಮನುಷ’್ಯದಲ್ಲಿ ರೈತರ ಸಮಸ್ಯೆ ಬಗ್ಗೆ ತೋರಿಸಲಾಗಿತ್ತು. ಈಗ ‘ಮಾಸ್‍ಲೀಡರ್’ನಲ್ಲಿ ಸೈನಿಕನಾಗಿದ್ದೀನಿ. ‘ಟಗರು’ನಲ್ಲಿ ಎರಡು ಶೇಡ್ ಪಾತ್ರವಿದೆ. ‘ಮಫಿ’್ತಯಲ್ಲಿಯೂ ಶ್ರೀಮುರಳಿಯ ಜೊತೆಗೆ ನನ್ನದು ಪ್ರಮುಖ ಪಾತ್ರ. ಆದರೆ ಅದರ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ನಿರ್ದೇಶಕರಿಗೆ ಅವರದೇ ಆದ ತೀರ್ಮಾನಗಳಿರುತ್ತವೆ. ನಾವು ಅದನ್ನು ಗೌರವಿಸಲೇಬೇಕು. ಒಟ್ಟಿನಲ್ಲಿ ‘ಶಿವಣ್ಣ ಯಾವಾಗಲೂ ಮಾಡಿದ್ದನ್ನೇ ಮಾಡ್ತಾನೆ’ ಅನ್ನುವವರಿಗೆ ಇಲ್ಲಿ ಖಂಡಿತ ಡಿಫರೆನ್ಸ್ ಕಾಣ್ಸುತ್ತೆ ಎಂಬ ಭರವಸೆಯಿದೆ.

‘ಟಗರು’ ಚಿತ್ರದಲ್ಲಿನ ಇಬ್ಬರು ನಾಯಕಿಯರ ಬಗ್ಗೆ ಹೇಳಿ
ಮಾನ್ವಿತಾ ಮತ್ತು ಭಾವನಾ. ಮಾನ್ವಿತಾ ಚಿತ್ರದಲ್ಲಷ್ಟೇ ಅಲ್ಲ, ಸೆಟ್‍ನಲ್ಲಿಯೂ ಕ್ಯೂಟ್ ಹುಡುಗಿ. ಹೊಸಬಳಾದರೂ ಆಕೆಗೆ ಕಲಿಯುವ ಆಸಕ್ತಿಯಿದೆ. ವೆಲ್ ಬಿಹೇವ್ಡ್ ಪರ್ಸನ್. ಸಂದರ್ಭವನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಭಾವನಾ ಮಲಯಾಳಂ ನಟಿಯಾದರೂ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ್ದಾರೆ. ಅವರದೇನೇ ವೈಯಕ್ತಿಕ ತೊಂದರೆಗಳಿದ್ದರೂ ಸೆಟ್‍ನಲ್ಲಿ ತೋರಿಸಿಲ್ಲ. ನಮ್ಮ ಸೆಟ್‍ನಲ್ಲಿದ್ದ ಪಾಸಿಟಿವ್ ಎನರ್ಜಿಗೆ ಅವರು ಪಾಸಿಟಿವ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಸ್ಟಾರ್‍ಗಾಗಿ ಇಬ್ಬರು ನಾಯಕಿ ಎನ್ನುವುದಕ್ಕಿಂತ, ಇಬ್ಬರ ಪಾತ್ರಗಳಿಗೆ ನ್ಯಾಯವೊದಗಿಸುವಂಥ ಒಳ್ಳೆಯ ಕತೆ ಇದೆ.
ಸ್ಟಾರ್ ಸಿನಿಮಾಗಳ ಸಂಭಾಷಣೆಗಳು ಮತ್ತೊಬ್ಬ ಸ್ಟಾರ್‍ಗೆ ಅಥವಾ ಆತನ ಚಿತ್ರಕ್ಕೆ ಕೌಂಟರ್ ಹೊಡೆಯುವಂತೆ ಇರುತ್ತವಲ್ಲ? ಆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅದು ತಪ್ಪು. ಜೀವನದಲ್ಲಿ ಯಾರು ಯಾರನ್ನೂ ಕಿತ್ಕೊಳ್ಳಕ್ಕಾಗಲ್ಲ. ನಾವು ನಮ್ಮ ಚಿತ್ರದ ಅಗತ್ಯವಿರುವ ಸಂಭಾಷಣೆಗಳತ್ತ ಮಾತ್ರ ಗಮನ ಹರಿಸಬೇಕು. ಕೌಂಟರ್ ಕೊಡುತ್ತಾ ಹೋಗೋದು ಬೇಕಾಗಿಲ್ಲ. ಇಲ್ಲಿ ಯಾರೂ ದೊಡ್ಡವರಲ್ಲ. ‘ನಾನೇ ದೊಡ್ಡವನು’ ಎಂದುಕೊಂಡು ಮೆರೆದರೆ ದೇವರು ಅನ್ನೋನು ಮೇಲಿನಿಂದ ನೋಡ್ತಾ ಇರ್ತಾನೆ. ಸಾಧ್ಯ ಆದರೆ ಮತ್ತೋರ್ವ ನಟನನ್ನು ಗೌರವಿಸುವಂಥ ಪ್ರಯತ್ನಗಳಾದರೆ ಒಪ್ಪಬಹುದು.

ನೀವು ಕನ್ನಡದ ಎಲ್ಲಾ ಸ್ಟಾರ್‍ಗಳೊಂದಿಗೂ ಕಾಂಬಿನೇಶನ್ ದೃಶ್ಯಗಳಲ್ಲಿ ನಟಿಸಲು ಸಿದ್ಧರಿದ್ದೀರಾ?
ಖಂಡಿತ. ನಾನು ಆಲ್ರೆಡಿ ಅಂಬರೀಶ್, ರವಿಚಂದ್ರನ್‍ರಿಂದ ಹಿಡಿದು ಉಪೇಂದ್ರರ ತನಕ ಕಾಂಬಿನೇಶನ್ ಚಿತ್ರಗಳಲ್ಲಿ ನಟಿಸಿದ್ದೇನೆ. ಸುದೀಪ್ ಜೊತೆಗೆ ಶೂಟಿಂಗ್ ನಡೀತಿದೆ. ಯಾರೊಂದಿಗಾದರೂ ಮಾಡಿಲ್ಲ ಎಂದರೆ, ಕಾಲ ಕೂಡಿ ಬಂದಿಲ್ಲ ಎಂದಷ್ಟೇ ಅರ್ಥ. ಹಾಗಾಗಿಯೇ ಅಪ್ಪು ಜೊತೆಗೆ ಚಿತ್ರ ಮಾಡಲು ಸಾಧ್ಯವಾಗಿಲ್ಲ. ಕತೆ, ಪಾತ್ರ ಇಷ್ಟವಾದರೆ ದರ್ಶನ್ ಜೊತೆಗೂ ನಟಿಸೋಕೆ ನಾನು ರೆಡಿ. ದರ್ಶನ್ ತಂದೆ ನಮ್ಮ ಕುಟುಂಬದಂತೆ ಇದ್ದವರು. ಅವರ ನಟನೆಗೆ ನಾನು ಆಗಿನಿಂದಲೂ ಅಭಿಮಾನಿಯಾಗಿದ್ದವನು. ದರ್ಶನ್ ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ನನಗೆ ಗೊತ್ತು. ಚಿತ್ರರಂಗ ಅಂದಮೇಲೆ ಒಂದು ಮಾತು ಬರುತ್ತೆ, ಹೋಗುತ್ತೆ. ಕೆಡುಕನ್ನೆಲ್ಲ ಮನಸಲ್ಲಿಟ್ಟುಕೊಳ್ಳುವ ಅಭ್ಯಾಸ ನನಗಿಲ್ಲ. ಒಳ್ಳೆಯ ಸಿನಿಮಾಗಳು ಬಂದಾಗಲೆಲ್ಲ ಒಳ್ಳೆಯ ಕಲಾವಿದರು ಗುರುತಿಸಲ್ಪಡುತ್ತಾರೆ.

‘ಮುನಿರತ್ನ ಕುರುಕ್ಷೇತ ಚಿತ್ರದಲ್ಲಿ ನೀವು ಕರ್ಣನ ಪಾತ್ರ ಒಪ್ಪಿಕೊಳ್ಳಲಿಲ್ಲವೇಕೆ?
ಬಹುಶಃ ನಿಮಗೆ ಈಗಾಗಲೇ ಇದಕ್ಕೆ ಮುನಿರತ್ನ ಅವರೇ ಕಾರಣ ಹೇಳಿರಬಹುದು. ಅವರು ಎರಡು ವರ್ಷ ಮೊದಲೇ ಇಂಥದೊಂದು ಯೋಜನೆ ಹಾಕಿ ಕಲಾವಿದರನ್ನು ಸಂಪರ್ಕಿಸಿದ್ದರೆ, ಅವರು ಬಯಸುವಂತೆ ಕನ್ನಡದ ಎಲ್ಲ ಸ್ಟಾರ್ ನಟರು ಕೂಡ ಸೇರಿ ನಟಿಸಬಹುದಿತ್ತು. ಆದರೆ ಅವರು ಕೇಳಿರುವ ಕಾಲಾವಧಿಯಲ್ಲಿ ಆಲ್ರೆಡಿ ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್ ನಡೆಯುತ್ತಿರುವ ಕಾರಣ ನನಗೆ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಮಾತ್ರವಲ್ಲ, ಐತಿಹಾಸಿಕ ಪಾತ್ರ ಎಂದರೆ ಅದಕ್ಕೆ ತಕ್ಕಂತೆ ಮೈಕಟ್ಟು ಹುರಿಗೊಳಿಸಬೇಕು. ಅದಕ್ಕಾಗಿಯೇ ಸಾಕಷ್ಟು ಪೂರ್ವ ತಯಾರಿಬೇಕಾಗಿತ್ತು. ಇಲ್ಲವಾದರೆ ಅಭಿಮಾನಿಗಳ ಆಸೆಯಂತೆ ದುರ್ಯೋಧನ ದರ್ಶನ್ ಜೊತೆಗೆ ಕರ್ಣನ ಸ್ನೇಹದ ಸನ್ನಿವೇಶಗಳನ್ನು ತೋರಿಸುವ ಅವಕಾಶವಿತ್ತು.

ನಟ ಉಪೇಂದ್ರರ ಪ್ರಜಾಕೀಯದ ಭಾಗವಾಗಲು ಬಯಸುತ್ತೀರ?
ನನಗೆ ರಾಜಕೀಯ ಆಗ್ಬರಲ್ಲ. ಯಾಕೆಂದರೆ ಆ ವ್ಯವಸ್ಥೆಯಲ್ಲಿ ಯಾರಿಗೂ ಪ್ರಾಮಾಣಿಕರಾಗಿರಲು ಸಾಧ್ಯವಿಲ್ಲ. ನಾನೇ ಹೋದರೂ ಬದಲಾಗಬೇಕಾಗುತ್ತದೆ. ನಾನು ಬಣ್ಣ ಹಚ್ಚೋದು ಸಿನಿಮಾಗೆ ಮಾತ್ರ. ಇನ್ನು ಉಳಿದಂತೆ ಹೋಳಿಯಲ್ಲಿ ಹಚ್ಚಿ ಗೊತ್ತು. ಅದು ಬಿಟ್ಟು ಬೇರೆ ರೀತಿಯಿಂದ ಬಣ್ಣ ಹಚ್ಕೊಳ್ಳೋದು ನನಗೆ ಆಗದ ಕೆಲಸ. ಮೊದಲು ಪ್ರತಿಯೊಬ್ಬರು ಒಳ್ಳೆಯ ಮನುಷ್ಯನಾಗಬೇಕು. ಆಗ ಒಳ್ಳೆಯ ಮತದಾರನಾಗಲಿಕ್ಕಾದರೂ ಸಾಧ್ಯವಾದೀತು! ಈ ನಿಟ್ಟಿನಲ್ಲಿ ಉಪೇಂದ್ರ ಹೊಸ ಭರವಸೆ ಮೂಡಿಸಿದ್ದಾರೆ. ಯಾಕೆಂದರೆ ಅವರ ಕ್ರಿಯೇಟಿವಿಟಿ ಬಗ್ಗೆ ಎಲ್ಲರಿಗೂ ಗೊತ್ತು. ಮೊದಲು ಅವರ ಕನಸಿನ ಪ್ರಜಾಕೀಯ ಸ್ಥಾಪನೆ ಯಶಸ್ಸಾಗಲಿ ಎಂದು ಹಾರೈಸುತ್ತೇನೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!