ಚಂದನವನದಲ್ಲಿ ಹೊಸಬರ ತಂಡ ಸೇರಿಕೊಂಡು “ಒಂದ್ ಊರಲ್ ಒಂದ್ ಲವ್ ಸ್ಟೋರಿ” ಎನ್ನುವ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಶೀರ್ಷಿಕೆ ನೋಡಿದರೆ ಇದೊಂದು ಪ್ರೀತಿ ಕಥೆಯಾಗಿದ್ದು , ಈಗಾಗಲೇ ಪ್ರೀತಿ ಪ್ರೇಮದ ಸುತ್ತ ಹಲವಾರು ಚಿತ್ರಗಳು ಬಂದು ಹೋಗಿವೆ. ವಿದ್ಯಾರ್ಥಿ ಜೀವನದಲ್ಲಿ ಪ್ರೀತಿಗೆ ಬಿದ್ದರೆ ಅದು ಪ್ರೀತಿಯೇ.. ವ್ಯಾಮೋಹವೇ… ಎಂಬ ಹಲವು ಗೊಂದಲಗಳು ಎದುರಾಗುವುದು ಸರ್ವೇ ಸಾಮಾನ್ಯ. ಇದರ ನಡುವೆ ಕುಟುಂಬಗಳ ಪರದಾಟ, ಜಾತಿಗಳ ಅಡ್ಡಗಾಲು ಹೀಗೆ ಹಲವಾರು ಏಳಿಬೀಳಗಳನ್ನ ಒಳಗೊಂಡಿರುವಂತಹ ಯುವಪಡೆಗಳ ವಿಭಿನ್ನ ಕಥಾ ಹಂದರದ ಚಿತ್ರವಾಗಿ ತೆರೆಯ ಮೇಲೆ ಬರಲು ಸನ್ನದ್ಧವಾಗಿದೆ.
ಈ “ಒಂದ್ ಊರಲ್ ಒಂದ್ ಲವ್ ಸ್ಟೋರಿ” ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಈ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಅತಿಥಿಯಾಗಿ ಕಿರುತೆರೆ ನಟಿ ಅಶ್ವಿನಿ ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕರುಗಳಾದ ಜಿ.ಕೆ.ಮುದ್ದುರಾಜ್, ಸುಧಾಕರ್ ಬನ್ನಂಜೆ, ಹನುಮಂತನ ವಿನೋಳ ಮುಂತಾದವರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.
ಬೆಣ್ಣದೋಸೆ ನಗರದ ಖ್ಯಾತ ವಕೀಲ, ಸಾಹಿತಿ ಮತ್ತು ರಂಗಭೂಮಿ ಕಲಾವಿದ ಡಾ.ರೇವಣ್ಣ ಬಳ್ಳಾರಿ ರವರು ಶ್ರೀ ವೀರಭದ್ರೇಶ್ವರ ಸಿನಿ ಕಂಬೈನ್ಸ್ ಮೂಲಕ ನಿರ್ಮಾಣ ಮಾಡುವ ಜೊತೆಗೆ ಮುಖ್ಯ ಶಿಕ್ಷಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಕೆ.ಪ್ರಕಾಶ್ ಪಾಲುದಾರರಾಗಿದ್ದು, ಇವರ ಪುತ್ರ ಪೃಥ್ವಿ ನಾಯಕನಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅರಕಲಗೂಡಿನ ಎಂ.ಪಿ.ಅರುಣ್ ರಚನೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿದ್ದು, ’ಇದೇ ನಮ್ ಲೈಫ್ ಸ್ಟೋರಿ’ ಎಂಬ ಅಡಿಬರಹವಿರುವ ಈ ಚಿತ್ರವು ಯುವ ಮನಸುಗಳ ತೊಳಲಾಟವನ್ನು ಹೇಳಲಾಗಿದೆಯಂತೆ. ಪ್ರೌಡಶಾಲೆಗೆ ಬಂದ ಯುವ ಮನಸುಗಳು ಪ್ರೀತಿಯ ಬಲೆಗೆ ಬೀಳುತ್ತಾರೆ. ಅದು ಪ್ರೀತಿ ಅಲ್ಲ. ವಯೋಮಾನದ ಆಕರ್ಷಣೆ.
ಒಂದು ಕುಟುಂಬದಲ್ಲಿ ಹುಡುಗಿ, ಮಗ, ಮತ್ತೋಂದು ಕುಟುಂಬದಲ್ಲಿ ಒಬ್ಬನೆ ಪುತ್ರ. ಹೀಗೆ ಎರಡು ಕಡೆಯಿಂದ ಲವ್ಗೆ ಬಿದ್ದಾಗ ಜಾತಿ ಅಡ್ಡ ಬರುತ್ತದೆ. ತಂದೆ ತಾಯಿ ಮುಖ್ಯ ಎಂಬುದನ್ನು ಅರಿತು ಪ್ರೀತಿಯನ್ನು ತ್ಯಾಗ ಮಾಡುತ್ತಾರೆ. ಮುಂದೆ ಅವರ ಬದುಕಿನಲ್ಲಿ ಏನೆಲ್ಲ ತಿರುವುಗಳು ಎದುರಾಗುತ್ತವೆ ಎಂಬುದೇ ಚಿತ್ರದ ಮುಖ್ಯ ಏಳೆಯಾಗಿದೆ. ಹತ್ತನೇ ತರಗತಿಗೆ ಬಂದಾಗ ನಮಗೆ ಗೊತ್ತಿಲ್ಲದೆ ಲವ್ ಮಾಡಿದರೆ ಏನಾಗುತ್ತದೆ. ಇದು ಎಲ್ಲರೂ ನೋಡಬೇಕಾದ ಚಿತ್ರವಾಗಿದೆ. ದೊಡ್ಡವರಿಗೆ ನಾವು ಈ ತರಹ ಮಾಡಿದ್ದೇವಾ? ಸಣ್ಣವರು ಈ ರೀತಿ ಮಾಡಬಾರದು. ಸರಿಯಾದ ವಯಸ್ಸಿನಲ್ಲಿ ಸೆಳತಕ್ಕೆ ಬಿದ್ದರೆ ಪ್ರೀತಿಯನ್ನು ಉಳಿಸಿಕೊಳ್ಳಬಹುದೆಂದು ಅರ್ಥಪೂರ್ಣ ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆಯಂತೆ.
ಕಳಸ ಮೂಲದ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಮತಾ ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆರು ಹಾಡುಗಳಿಗೆ ಸಂಗೀತ ಎ.ಎಂ.ನೀಲ್, ಛಾಯಾಗ್ರಹಣ ರವಿ, ಸಂಕಲನ ಜೀವನ್, ಗೀತರಚನೆ ಕೆ.ಜೆ.ಸ್ವಾಮಿ, ನೃತ್ಯ ಸುರೇಶ್, ಕಲೆ ಬಾಬುಖಾನ್, ಸಾಹಸ ಕೌರವವೆಂಕಟೇಶ್ ನಿರ್ವಹಿಸಿದ್ದಾರೆ. ದಾವಣಗೆರೆ, ಹುಬ್ಬಳ್ಳಿ, ಕೂಟ್ಟೂರು, ಕಾರಿಗನೂರು, ಕಂಚಿಕೆರೆ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಹೊಸಬರ ತಂಡ ಸೇರಿ ನಿರ್ಮಿಸಿರುವ ಈ ಚಿತ್ರವನ್ನು ಉತ್ತಮ ರೀತಿ ಪ್ರಚಾರದ ಮಾಡುವ ಮೂಲಕ ಆದಷ್ಟು ಬೇಗ ತೆರೆ ಮೇಲೆ ತರಲು ಸಿದ್ಧರಾಗುತ್ತಿದ್ದಾರಂತೆ.
Be the first to comment