ಕರ್ನಾಟಕದಲ್ಲಿ ಆರ್ ಆರ್ ಆರ್ ಸಿನಿಮಾ ನೋಡಲು ಸಿನಿಪ್ರಿಯರು ಮುಗಿ ಬಿದ್ದಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿತ್ರದ ಪ್ರಮುಖ ಪಾತ್ರಧಾರಿಗಳಾದ ರಾಮ್ ಚರಣ್ ಮತ್ತು ಜ್ಯೂ. ಎನ್‌ಟಿಆರ್ ನೋಡಲು ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಮಾ.24ರ ರಾತ್ರಿ, ಮಾ.25 ನಸುಕಿನಲ್ಲೇ ಹಲವೆಡೆ ಈ ಸಿನಿಮಾದ ಪ್ರದರ್ಶನ ಆರಂಭಗೊಂಡಿದೆ. ತೆಲುಗು ಸಿನಿಮಾ ಆಗಿದ್ದರೂ ಕರ್ನಾಟಕದಲ್ಲಿ ಜನರು ಈ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ.
ರಾಜಮೌಳಿ ನಿರ್ದೇಶನದ ಸಿನಿಮಾ ಆಗಿರುವ ಕಾರಣ ಈ ಚಿತ್ರದ ಮೇಲೆ ನಿರೀಕ್ಷೆಯ ಮಟ್ಟ ಜೋರಾಗಿಯೇ ಇದೆ. ಅದಕ್ಕೆ ತಕ್ಕಂತೆಯೇ ಕರ್ನಾಟಕದ ಬಹುತೇಕ ಕಡೆಗಳಲ್ಲಿ ‘ಆರ್‌ಆರ್‌ಆರ್’ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ನಿನ್ನೆ ರಾತ್ರಿಯಿಂದ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಚಿತ್ರ ನೋಡಲು ಜಮಾಯಿಸಿದ್ದಾರೆ.
ಬೆಂಗಳೂರಿನ ಮಡಿವಾಳದ ಸಂಧ್ಯಾ ಥಿಯೇಟರ್ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದ ಮೊದಲ ಶೋ ಆರಂಭ ಆಗಿದೆ. ಬಳ್ಳಾರಿಯ ‘ರಾಧಿಕಾ’ ಚಿತ್ರಮಂದಿರದಲ್ಲಿ ಪೇಕ್ಷಕರ ನೂಕುನುಗ್ಗಲು ಉಂಟಾಗಿದ್ದು, ಮಧ್ಯರಾತ್ರಿ 12:45ಕ್ಕೆ ಮೊದಲ ಶೋ ಆರಂಭ ಆಗಿದೆ.
ಚಿಕ್ಕಬಳ್ಳಾಪುರದ ಬಾಲಾಜಿ ಚಿತ್ರಮಂದಿರದಲ್ಲಿ ಫ್ಯಾನ್ ಶೋ ಆಯೋಜಿಸಲಾಗಿದ್ದು, ಇಂದು ಬೆಳಿಗ್ಗೆ 5 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಬೆಂಗಳೂರಿನ ಭೂಮಿಕಾ ಚಿತ್ರಮಂದಿರದ ಎದುರು ತೆಂಗಿನಕಾಯಿ ಒಡೆದು, ಪಟಾಕಿ ಸಿಡಿಸಿ ಅಭಿಮಾನಿಗಳು ‘ಆರ್‌ಆರ್‌ಆರ್’ ಸಿನಿಮಾವನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಇಲ್ಲಿ ಮಧ್ಯರಾತ್ರಿ 12 ಗಂಟೆಯಿಂದ ಶೋ ಆರಂಭಗೊಂಡಿದೆ.
ಕೋಲಾರ ಜಿಲ್ಲೆಯಲ್ಲಿ ಆರ್‌ಆರ್‌ಆರ್ ಸಿನಿಮಾದ ಹವಾ ಜೋರಾಗಿದ್ದು, ಜಿಲ್ಲೆಯ ಒಟ್ಟು 10 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಚಿತ್ರದುರ್ಗದ 2 ಥಿಯೇಟರ್ಗಳಲ್ಲಿ ‘ಆರ್‌ಆರ್‌ಆರ್’ ಚಿತ್ರ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹುಬ್ಬಳಿಯಲ್ಲಿ ಎರಡು ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ ಸೇರಿದಂತೆ ಒಂದೇ ದಿನ 30 ಶೋ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು ಹದಿನೈದು ಚಿತ್ರಮಂದಿರದಲ್ಲಿ ‘ಆರ್‌ಆರ್‌ಆರ್’ ಸಿನಿಮಾ ಪ್ರದರ್ಶನ ಆಗುತ್ತಿದೆ.
ಬೆಂಗಳೂರಿನ ಅಂಜನ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ಗಲಾಟೆ ನಡೆದಿದೆ. ಜೂ. ಎನ್‌ಟಿಆರ್ ಹಾಗೂ ಚರಣ್ ಅಭಿಮಾನಿಗಳ ಮಧ್ಯೆ ಕಿರಿಕ್ ಆಗಿದ್ದು, ತಮ್ಮ ಹೀರೋನೇ ಹೆಚ್ಚೆಂಬ ವಿಚಾರಕ್ಕೆ ನಡೆದ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಬಗ್ಗೆ ವರದಿಯಾಗಿದೆ.
ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ಆರ್‌ಆರ್‌ಆರ್’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ. ಈ ಚಿತ್ರದಲ್ಲಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ.
Be the first to comment