ಏ.೧ಕ್ಕೆ‘ಹೋಮ್ ಮಿನಿಸ್ಟರ್’ ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ ‘ಹೋಮ್ ಮಿನಿಸ್ಟರ್’ ಚಿತ್ರ ಇದೇ ಏಪ್ರಿಲ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಜಿಬ್ರಾನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಆನಂದ್ ಆಡಿಯೋ ಮೂಲಕ ಈ ಹಾಡುಗಳು ಬಿಡುಗಡೆಯಾಗಿವೆ.

ಸಚಿವ ಮುನಿರತ್ನ , ಗೋಲ್ಡನ್‌ ಸ್ಟಾರ್ ಗಣೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ನಿರಂಜನ್ ಸುಧೀಂದ್ರ, ಪ್ರಿಯಾಂಕ ಉಪೇಂದ್ರ ಹಾಗೂ ಸಾಯಿ ಗೋಲ್ಡ್ ‌ಪ್ಯಾಲೆಸ್ ನ ಶರವಣ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.

‘ಕೊರೊನಾ ಪೂರ್ವದಲ್ಲಿ ನಮ್ಮ ಚಿತ್ರ  ಆರಂಭವಾಯಿತು. ಚಿತ್ರದ ಕಥೆ ಕೇಳಿದಾಗ ನನಗೆ ಒಂದು ಕಡೆ ಇಷ್ಟವಾದರೆ, ಮತ್ತೊಂದು ಕಡೆಯಿಂದ ಭಯ. ಜನ ಈ ಕಥೆಯನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೋ? ಅನ್ನೂ ಪ್ರಶ್ನೆ ಮೂಡಿತ್ತು. ಕೊನೆಗೆ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಅವರು, ಈ ಸಿನಿಮಾ ಮಾಡೋಣ ಸರ್… ಎಲ್ಲರಿಗೂ ಹಿಡಿಸುತ್ತದೆ ಎಂದು ಭರವಸೆ ನೀಡಿದರು. ಇದೇ ಏಪ್ರಿಲ್ 1ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಜನ ಮೆಚ್ಚಿಕೊಳ್ಳುತ್ತಾರೆಂಬ ನಿರೀಕ್ಷೆಯಿದೆ. ನನ್ನೊಂದಿಗೆ ನಟಿಸಿರುವ ವೇದಿಕ, ತಾನ್ಯ ಹೋಪ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನಮ್ಮ ಕರೆಗೆ ಓಗೊಟ್ಟು ಬಂದಿರುವ ಎಲ್ಲಾ ಗಣ್ಯರಿಗೆ ಧನ್ಯವಾದ’ವೆಂದು ಉಪೇಂದ್ರ ಹೇಳಿದರು.

ಚಿತ್ರದಲ್ಲಿ ನಟಿಸಿರುವ ವೇದಿಕ, ತಾನ್ಯ ಹೋಪ್, ಚಾಂದಿನಿ, ವಿನಯ್ ಚಂಡೂರ್, ಸಂಭಾಷಣೆ ಬರೆದಿರುವ ಧರ್ಮೇಂದ್ರ, ನಿರ್ಮಾಪಕರಾದ ಪೂರ್ಣಚಂದ್ರ ನಾಯ್ಡು, ಶ್ರೀಕಾಂತ್ ವೀರಮಾಚನೇನಿ ಹಾಗೂ ಚಿತ್ರವನ್ನು ಬಿಡುಗಡೆ ಮಾಡುತ್ತಿರುವ ಬೆಂಗಳೂರಿನ ಕುಮಾರ್ ಫಿಲಂಸ್ ನ ಕುಮಾರ್ ‘ಹೋಮ್ ಮಿನಿಸ್ಟರ್’ ಕುರಿತು ಮಾತನಾಡಿದರು.

ಸುಜಯ್ ಕೆ ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ವೇದಿಕ, ತಾನ್ಯ ಹೋಪ್, ಚಾಂದಿನಿ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕ ಅವಿನಾಶ್, ಲಾಸ್ಯ ಮುಂತಾದವರಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!