ರಣವೀರ್ ಸಿಂಗ್ ಅಭಿನಯದ, ಟೀಮ್ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ ಕುರಿತ ಕಥೆಯನ್ನು ಹೊಂದಿದ ’83’ ಸಿನಿಮಾವನ್ನು ಒಟಿಟಿ ವೇದಿಕೆಗಳಾದ ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.
83 ಸಿನಿಮಾವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಪ್ರಸಾರದ ಹಕ್ಕು ಕುರಿತಂತೆ ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್ ಮಧ್ಯೆ ಸಮಸ್ಯೆ ಸೃಷ್ಟಿಯಾಗಿತ್ತು. ಚಿತ್ರದ ಡಿಜಿಟಲ್ ಹಕ್ಕುಗಳು ಹಾಗೂ ಸೆಟಲೈಟ್ ಹಕ್ಕಿನ ಕುರಿತು ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು.
ಸಿನಿಮಾದ ಹಕ್ಕು ಮತ್ತು ಮಾಲೀಕತ್ವವು ಮ್ಯಾಡ್ ಮ್ಯಾನ್ ಫಿಲ್ಮ್ ವೆಂಚರ್ಸ್, ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ವೈಬ್ರಿ ಮೀಡಿಯಾಗಳ ಮಧ್ಯೆ ಹಂಚಿಕೆಯಾಗಿದೆ.
’83’ ಸಿನಿಮಾ, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅವರ ಅಭಿನಯ ಹೊಂದಿದ್ದು, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿತ್ತು.
ಕಬೀರ್ ಖಾನ್ ನಿರ್ದೇಶನದ ಬಹುನಿರೀಕ್ಷಿತ ’83’ ಚಿತ್ರ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದ ರೋಚಕ ಕಥೆಯನ್ನು ಹೊಂದಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬಂದಿದೆ.
ಕಪಿಲ್ ದೇವ್ ಅವರ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಕಪಿಲ್ ದೇವ್ ಅವರ ಪತ್ನಿ ರೋಮಿ ದೇವ್ ಅವರ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಮದುವೆ ಆದ ಬಳಿಕ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಇದಾಗಿದೆ.
ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿದ್ದ ದೀಪಿಕಾ ಪಡುಕೋಣೆ ಅವರು 15 ವರ್ಷಗಳ ಬಳಿಕ ಕನ್ನಡದ ಈ ಡಬ್ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಆಗಿದೆ.
Be the first to comment