ನಿನ್ನೆ ಚಿಕ್ಕಬಳ್ಳಾಪುರದಲ್ಲಿ ನಡೆದ ಆರ್ ಆರ್ ಆರ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಆದರೆ ಅತಿಯಾದ ಜನ ಪ್ರವಾಹದಿಂದಾಗಿ ಕಾರ್ಯಕ್ರಮ ಅವ್ಯವಸ್ಥಿತ ಆಗಿದ್ದು ಹಲವು ವಿವಾದಕ್ಕೂ ಕಾರಣವಾಯಿತು.
ದೊಡ್ಡ ಬಯಲು ಪ್ರದೇಶದಲ್ಲಿಯೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸಮಯಕ್ಕೆ ಮುಂಚಿತವಾಗಿಯೇ ಆಗಮಿಸಿದರು. ನಾಲ್ಕು ಗಂಟೆಯಿಂದಲೇ ವೇದಿಕೆ ಮುಂಭಾಗ ಜನ ಸೇರಲು ಆರಂಭಿಸಿದರು. ಕಾರ್ಯಕ್ರಮ ನಿಗದಿಯಾಗಿದ್ದಿದ್ದು ಸಂಜೆ ಆರು ಗಂಟೆಗೆ. ಆದರೆ ಕಾರ್ಯಕ್ರಮ ಬಹಳ ತಡವಾಗಿ ಆರಂಭವಾಯಿತು.
ಆ ಬಿಸಿಯಲ್ಲಿ, ಧೂಳಿನಲ್ಲಿ ಕಾದು ಕಾದು ಸುಸ್ತಾಗಿದ್ದ ಪ್ರೇಕ್ಷಕರು ಬೇಸತ್ತು ಹೋಗಿದ್ದರು. ನಿರೂಪಕಿಯರಾದ ಅನುಶ್ರೀ, ಸುಮಾ ವೇದಿಕೆ ಮೇಲೆ ಆಗಮಿಸುವ ವೇಳೆಗೆ ನೀರು ತುಂಬಿದ್ದ ಬಾಟಲಿಗಳನ್ನು ವೇದಿಕೆಗೆ ಅಭಿಮಾನಿಗಳು ಎಸೆಯಲು ಆರಂಭಿಸಿದರು.
ಹಲವರು ವೇದಿಕೆ ಮೇಲಕ್ಕೆ, ವಿಶೇಷವಾಗಿ ಬೌನ್ಸರ್‌ಗಳನ್ನು ಗುರಿಯಾಗಿಸಿಕೊಂಡು ನೀರಿನ ಬಾಟಲಿಗಳನ್ನು ಎಸೆಯಲು ಆರಂಭಿಸಿದರು. ಬಳಿಕ ಚೇರ್‌ಗಳ ಮೇಲೆ ಹಾಕಲಾಗಿದ್ದ ಬಟ್ಟೆಗಳನ್ನು ಸುತ್ತಿ ಅವನ್ನು ಎಸೆಯಲು ಆರಂಭಿಸಿದರು.
ಪ್ರೀ ರಿಲೀಸ್‌ನಲ್ಲಿ ಬೌನ್ಸರ್‌ಗಳ ಅನಾಗರಿಕ ವರ್ತನೆ ತೋರಿದ್ದೂ ಆಯಿತು.
ಕಾರ್ಯಕ್ರಮ ಆರಂಭವಾಗಿ ಡ್ಯಾನ್ಸ್ ಕಾರ್ಯಕ್ರಮಗಳು ನಡೆಯುವ ವೇಳೆಗೆ ವೇದಿಕೆ ಎಡ ಬದಿಯಲ್ಲಿ ಭಾರಿ ಸಂಖ್ಯೆಯ ಜನ ಸೇರಿಕೊಂಡಿದ್ದರು. ಅವರಲ್ಲಿ ಕೆಲವು ಕಿಡಿಗೇಡಿಗಳು ಚಪ್ಪಲಿಗಳನ್ನು ತೂರಿದರು. ಹೀಗೆ ತೂರಿದ ಚಪ್ಪಲಿಗಳು ಪೊಲೀಸರ ಬಳಿ ಬಿದ್ದ ಕಾರಣ ಅವರು ಒಮ್ಮೆಲೆ ಲಾಠಿ ಮುನ್ನುಗ್ಗಿದರು. ಪೊಲೀಸರ ಲಾಠಿಗೆ ಹೆದರಿ ನೂರಾರು ಮಂದಿ ಹಿಂದಕ್ಕೆ ಓಡಿದರು. ಆಗ ಕಬ್ಬಿಣದ ಗೇಟ್ ಮೇಲೆ ಕುಳಿತಿದ್ದವರು ಕೆಳಗೆ ಬಿದ್ದು ಹಲವರ ಕಾಲುಗಳು ಗೇಟ್ ಕೆಳಗೆ ಸಿಲುಕಿಕೊಂಡು ತೀವ್ರ ಬಾಧೆ ಅನುಭವಿಸಿದರು. ಕೆಲವರಿಗೆ ಗಾಯಗಳಾಗಿ ರಕ್ತ ಸುರಿಯಲಾರಂಭಿಸಿತು. ಲಾಠಿ ಬೀಸಿದ ಪೊಲೀಸರ ಮೇಲೆ ಕೆಲವು ಸಾರ್ವಜನಿಕರು ಜಗಳ ಸಹ ಮಾಡಿದರು.
ವೇದಿಕೆ ಸುತ್ತ-ಮುತ್ತ ಜನ ಬಹಳ ಹೆಚ್ಚಾದ ಕಾರಣ ಪೊಲೀಸರು, ಬೌನ್ಸರ್‌ಗಳು ಆಗಾಗ್ಗೆ ಅಭಿಮಾನಿಗಳಿಗೆ ಲಾಠಿ ರುಚಿ ತೋರಿದರು. ಇವೆಂಟ್ ನಡೆಯುವ ಸ್ಥಳಕ್ಕೆ ಬರಲಾಗದೆ ಹೊರಗೆ ನಿಂತವರು ಸಹ ಕೆಲವರು ಹೊರಗಿನಿಂದ ಒಳಕ್ಕೆ ಜನರ ಮೇಲೆ ಬಾಟಲಿಗಳನ್ನು ಬೀಸಿದ ಘಟನೆಗಳೂ ನಡೆದವು. ಒಟ್ಟಿನಲ್ಲಿ ಹಲವು ಸಮಸ್ಯೆಗಳನ್ನು ಅನುಭವಿಸಿಕೊಂಡು ತಮ್ಮ ಮೆಚ್ಚಿನ ನಟರನ್ನು ಕಂಡು ಅಭಿಮಾನಿಗಳು ಖುಷಿಪಟ್ಟರು.
Be the first to comment