James Movie Review: ಅದ್ಧೂರಿ ಮೇಕಿಂಗ್ ನಡುವೆ ಕಾಡುವ ಅಪ್ಪು ನೆನಪು

ಚಿತ್ರ: ಜೇಮ್ಸ್
ತಾರಾಗಣ: ಪುನೀತ್ ರಾಜ್‌ಕುಮಾರ್,ಪ್ರಿಯಾ ಆನಂದ್, ರಂಗಾಯಣ ರಘು,ಶರತ್‌ಕುಮಾರ್, ಶ್ರೀಕಾಂತ್
ನಿರ್ದೇಶನ: ಚೇತನ್ ಕುಮಾರ್
ನಿರ್ಮಾಪಕ: ಕಿಶೋರ್ ಪತ್ತಿಕೊಂಡ
ರೇಟಿಂಗ್: 4/5

ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಜೇಮ್ಸ್ ಡ್ರಗ್ಸ್ ಜಗತ್ತಿನ ಕಥಾಹಂದರ ಹೊಂದಿದೆ. ಅದ್ಧೂರಿಯಾಗಿ ಮೂಡಿ ಬಂದಿರುವ ಜೇಮ್ಸ್ ಚಿತ್ರ ನೋಡುಗರನ್ನು ಪುನೀತ್ ಅವರ ನಟನೆಯ ಮೂಲಕ ಹಿಡಿದಿಡುತ್ತದೆ. ಇದರ ಜೊತೆಗೆ ಪುನೀತ್ ನಮ್ಮ ಮುಂದೆ ಇಲ್ಲವಲ್ಲ ಎನ್ನುವ ಕೊರಗನ್ನೂ ತಂದಿಡುತ್ತದೆ.
ಚಿತ್ರದ ಪ್ರತೀ ಫ್ರೇಮಲ್ಲೂ ಪುನೀತ್ ಅವರು ಸ್ಟೈಲಿಷ್ ಜೇಮ್ಸ್‌ ಬಾಂಡ್ ರೀತಿ ಕಂಗೊಳಿಸಿದ್ದಾರೆ. ಬಂದೂಕನ್ನು ಆಟದ ಸಾಮಾನಿನ ರೀತಿ ಬಳಸಿ ಹತ್ತಾರು ಮಂದಿಯನ್ನು ಸುಟ್ಟು ಬಿಸಾಕುವ ಶೂಟರ್, ಗೆಳೆಯರನ್ನು ಪ್ರೀತಿಯಿಂದ ನೋಡುವ ವ್ಯಕ್ತಿ ಆಗಿ ಪುನೀತ್ ಸಿನಿಮಾದ ಬಳಿಕವೂ ಕಾಡುತ್ತಾರೆ.
ಒಂದು ರೀತಿಯಲ್ಲಿ ಜೇಮ್ಸ್‌ ವನ್ ಮ್ಯಾನ್ ಶೋ. ಇಲ್ಲಿ ದೊಡ್ಡ ತಾರಾಗಣ ಇದೆ. ಮತ್ತೆ ನೋಡಬೇಕೆನ್ನಿಸುವ ಲೊಕೇಶನ್‌ ಇವೆ. ಡ್ರಗ್ ಮಾಫಿಯಾದ ಕತೆ ಇಲ್ಲಿದೆ. ಇದಕ್ಕೆ ಪೂರಕವಾಗಿ ದೇಶಪ್ರೇಮದ ಟಚ್ ಅಪ್ ಇದೆ. ಪುನೀತ್ ಅವರಿಗೆ ಹೊಡೆದು ಹಾಕಲು ಕೈಗೊಂದು ಕಾಲಿಗೊಂದು ವಿಲನ್‌ಗಳು ಇದ್ದಾರೆ. ಒಟ್ಟಾರೆ ಇಲ್ಲಿ ಎಲ್ಲವೂ ಅದ್ಧೂರಿ ಆಗಿ ಮೂಡಿ ಬಂದಿದೆ.

ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ನಟನೆ ಮಾಡಿರುವುದು ವಿಶೇಷ. ಆದರೆ ಇವರು ಯಾರೂ ಜೊತೆಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಸಿನಿಮಾದಲ್ಲಿ ಇಂಟರ್ವೆಲ್ ಬಳಿಕ ಶಿವಣ್ಣ, ರಾಘಣ್ಣ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಸೈನ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಆಶ್ರಮದ ಮುಖ್ಯ ಗುರುವಿನ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಸಿನಿಮಾದಲ್ಲಿ ಹೆಚ್ಚಿನ ಸಂಭಾಷಣೆ ನೀಡಿಲ್ಲ.

ಜೇಮ್ಸ್’ ಸಿನಿಮಾ ಶೂಟಿಂಗ್ ಮಾಡುವಾಗ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರ ಪಾತ್ರ ಇರಲಿಲ್ಲ. ಆದರೆ ಪುನೀತ್ ನಿಧನದ ಬಳಿಕ ಇವರಿಬ್ಬರ ಪಾತ್ರಗಳನ್ನು ಸೃಷ್ಟಿಸಲಾಗಿದೆ. ಕತೆಗೆ ಹೊಂದಿಕೊಳ್ಳುವಂತೆ ಜಾಣತನದಿಂದ ದೃಶ್ಯ ಕಟ್ಟುವಲ್ಲಿ ನಿರ್ದೇಶಕ ಚೇತನ್ ಗೆದ್ದಿದ್ದಾರೆ.
ಅತಿವೃಷ್ಟಿಯಲ್ಲಿ ಸಂತೋಶ್ (ಪುನೀತ್) ಸೇರಿದಂತೆ ಕೆಲವು ಬಾಲಕರು ತಮ್ಮ ಪೋಷಕರನ್ನು ಕಳೆದುಕೊಂಡಿರುತ್ತಾರೆ. ಎಲ್ಲರೂ ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಅತಿವೃಷ್ಟಿಯಲ್ಲಿ ಸಿಲುಕಿದವರಿಗೆ ನೆರವಾಗುವ ಸೈನ್ಯದ ಗುಂಪಿನ ಮುಖ್ಯಸ್ಥನ ಪಾತ್ರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಸಂತ್ರಸ್ತ ಮಕ್ಕಳನ್ನು ಕೂರಿಸಿಕೊಂಡು ಹೇಳುವ “ಯಾರ ಮೇಲೆ ಪ್ರೀತಿ ಹೆಚ್ಚು ಇರುತ್ತೋ, ಅವರನ್ನು ಆ ದೇವರು ಬೇಗ ಕರೆದುಕೊಂಡು ಬಿಡುತ್ತಾರೆ” ಎನ್ನುವ ಸಂಭಾಷಣೆ ಪ್ರೇಕ್ಷಕನ ಹೃದಯ ಕರಗಿಸಿ ಪುನೀತ್ ರಾಜ್ ಕುಮಾರ್ ಹಠಾತ್ ನಿಧನವನ್ನು ನೆನಪು ಮಾಡುತ್ತದೆ.

ಪುನೀತ್ ಅವರಿಗೆ ಶಿವಣ್ಣ ಧ್ವನಿ ನೀಡುವ ಮೂಲಕ ಜೇಮ್ಸ್ ಪಾತ್ರಕ್ಕೆ ಜೀವ ತುಂಬುವ ಯತ್ನ ಮಾಡಿದ್ದಾರೆ.
ಸ್ವಾಮಿ ಗೌಡರ ಛಾಯಾಗ್ರಹಣ ಚೆನ್ನಾಗಿದೆ. ಚಿತ್ರದ ಮೊದಲಾರ್ಧದ ವೇಗದ ಓಟಕ್ಕೆ ಎಡಿಟರ್ ದೀಪು ಎಸ್ ಕುಮಾರ್ ಉತ್ತಮ ಕೊಡುಗೆ ನೀಡಿದ್ದಾರೆ. ಆದರೆ ಚಿತ್ರದಲ್ಲಿ ಹಾಡು ಯಾವುದಾದರೂ ನೆನಪಲ್ಲಿ ಉಳಿಯುತ್ತದೆಯೇ ಎಂದರೆ ಹೌದು ಎನ್ನುವುದು ಕಷ್ಟ.

ಚಿತ್ರದಲ್ಲಿ ಶರತ್ ಕುಮಾರ್, ಜಾನ್ ಕೊಕೇನ್ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ನಾಯಕ ನಟಿ ಪ್ರಿಯಾ ಆನಂದ್ ತೆರೆಯ ಮೇಲೆ ಕಂಗೊಳಿಸಿದ್ದಾರೆ. ಆಕ್ಷನ್ ಚಿತ್ರದಲ್ಲಿ ಮೆರೆದಿದೆ. ಸಿನಿಮಾ ನೋಡಿ ಬಂದ ಪ್ರೇಕ್ಷಕನಿಗೆ ಸಿನಿಮಾದಲ್ಲಿ ಕಾಣಸಿಗುವ ಪುನೀತ್ ಅವರ ನಗುಮುಖ ಕಾಡುತ್ತಲೇ ಹೋಗುತ್ತದೆ. ತೆರೆಯ ಮೇಲೆ ಆಕ್ಷನ್ ಮೆರೆದ ಪುನೀತ್ ಇನ್ನು ಮುಂದೆ ಹೊಸ ಚಿತ್ರಗಳಲ್ಲಿ ನಟಿಸುವುದಿಲ್ಲವಲ್ಲ ಎನ್ನುವ ಕೊರಗು ಬೇಸರಕ್ಕೆ ನೂಕುತ್ತದೆ.

@blind mad.in

Be the first to comment

Leave a Reply

Your email address will not be published. Required fields are marked *

Translate »
error: Content is protected !!