ಪಠ್ಯದಲ್ಲಿ ಪುನೀತ್ ಜೀವನಗಾಥೆ ಅಳವಡಿಸಲು ಚಿಂತನೆ

ಪುನೀತ್ ರಾಜ್ ಕುಮಾರ್ ಅವರ ಜೀವನ ಸಾಧನೆ ಪಠ್ಯದಲ್ಲಿ ಅಳವಡಿಕೆ ಆಗುವ ಸಾಧ್ಯತೆ ಇದೆ.

ಪುನೀತ್ ರಾಜ್‍ಕುಮಾರ್ ಅವರ ಜೀವನ ಗಾಥೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯವನ್ನಾಗಿ ಮಾಡುವಂತೆ ಹಲವಾರು ಸಂಘ-ಸಂಸ್ಥೆಗಳಿಂದ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಚಿಕ್ಕ ವಯಸಿನಲ್ಲೇ ಪ್ರಶಸ್ತಿ ಪಡೆಯುವುದರ ಜೊತೆಗೆ ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಜರಾಮರ ಸೇವೆ ಸಲ್ಲಿಸುವ ಮೂಲಕ ಮಕ್ಕಳು ಮತ್ತು ಯುವಕರಿಗೆ ಪುನೀತ್ ದಾರಿದೀಪವಾಗಿದ್ದಾರೆ. ಪುನೀತ್ ಅವರ ಜೀವನ ಗಾಥೆ ಮುಂದಿನ ಜನಾಂಗಕ್ಕೆ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ಅವರ ಪಠ್ಯವನ್ನು ಪ್ರಾಥಮಿಕ ಶಾಲೆಯ 4 ಅಥವಾ 5ನೆಯ ತರಗತಿಯ ಪಠ್ಯದಲ್ಲಿ ಅಳವಡಿಕೆ ಮಾಡಬೇಕು ಎಂದು ಹಲವಾರು ಸಂಘ-ಸಂಸ್ಥೆಗಳು ಬಿಬಿಎಂಪಿಯ ಶಿಕ್ಷಣ ವಿಭಾಗಕ್ಕೆ ಪತ್ರ ಬರೆದು ಒತ್ತಾಯ ಮಾಡಿದ್ದವು.

26 ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮ ಹಾಗೂ 4800ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ಓದಿಗೆ ಸೂರ್ತಿಯಾಗಿದ್ದ ಪುನೀತ್ ರಾಜ್‍ಕುಮಾರ್ ಅವರ ಪಠ್ಯವನ್ನು ಪ್ರಾಥಮಿಕ ಶಾಲಾ ಪುಸ್ತಕದಲ್ಲಿ ಅಳವಡಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರು.

ಬಿಬಿಎಂಪಿಯ ಶಿಕ್ಷಣ ಇಲಾಖೆಗೆ ಬಂದಿದ್ದ ಸಂಘ-ಸಂಸ್ಥೆಗಳ ಮನವಿಯನ್ನು ಪಾಲಿಕೆ ಅಕಾರಿಗಳು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದಾರೆ. ಎನ್.ಆರ್.ರಮೇಶ್ ಹಾಗೂ ಬಿಬಿಎಂಪಿಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ನಾಗೇಶ್ ಅವರು ಪ್ರಾಥಮಿಕ ಶಾಲೆಯ 4 ಅಥವಾ 5ನೆ ತರಗತಿಯ ಪಠ್ಯದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಬದುಕನ್ನು ಪಠ್ಯವನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!