ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಇಂದು ಪಿಆರ್‌ಕೆ ಸ್ಟುಡಿಯೋ ‘ಗಂಧದ ಗುಡಿ’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.
ಜೇಮ್ಸ್ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ಇರುವ ಪುನೀತ್ ಅಭಿಮಾನಿಗಳಿಗೆ ಇದು ಸಾಕಷ್ಟು ಸಂತೋಷ ನೀಡಿದೆ.
‘ಗಂಧದ ಗುಡಿ’ ಅಪ್ಪು ಕನಸು ಆಗಿದ್ದು ಈ ಬಗ್ಗೆ ಅವರು ಸಾಕಷ್ಟು ಆಸಕ್ತಿ ವಹಿಸಿದ್ದರು. ‘ಗಂಧದ ಗುಡಿ ‘ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಬಳಿಕ ತೆರೆಗೆ ಬರಲಿದೆ.
ಪುನೀತ್ ರಾಜ್ ಕುಮಾರ್ ಅವರ ಕನಸಾದ ” ಗಂಧದ ಗುಡಿ’ ಡಾಕ್ಯುಮೆಂಟರಿಯ ಬಿಡುಗಡೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ಅಮೋಘ ವರ್ಷ ಅವರ ಜೊತೆ ಸೇರಿ ‘ವೈಲ್ಡ್ ಕರ್ನಾಟಕ’ ಎಂಬ ಡಾಕ್ಯುಮೆಂಟರಿ ಸಿದ್ದಪಡಿಸಿದ್ದರು. ಅದಕ್ಕೆ ಗಂಧದ ಗುಡಿ ಎಂದು ಹೆಸರನ್ನು ಕೂಡ ಇಟ್ಟಿದ್ದರು. ಇದನ್ನು ರಾಜ್ಯದ ಹಲವು ಸ್ಥಳಗಳಲ್ಲಿ ಶೂಟ್ ಮಾಡಲಾಗಿತ್ತು. ಇದರಲ್ಲಿ ಪುನೀತ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ವರ್ಷ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಬೇಕಿತ್ತು. ಆದರೆ ಪವರ್ ಸ್ಟಾರ್ ಪುನೀತ್ ರಾಜ್ಕಕುಮಾರ್ ಅಕ್ಟೋಬರ್ 29ರಂದು ಹೃದಯಾಘಾತದಿಂದ ಹಠಾತ್ ನಿಧನರಾದರು.
ಈ ಮುನ್ನ ಪುನೀತ್ ಅವರು, ” ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. ನವೆಂಬರ್ 1ಕ್ಕಾಗಿ ಕಾಯಿರಿ’ ಎಂದು ಪೋಸ್ಟ್ ಮಾಡಿದ್ದರು.
ಈಗ ” ಗಂಧದ ಗುಡಿ ” ಡಾಕ್ಯುಮೆಂಟರಿಯ ಹೊಸ ಪೋಸ್ಟರ್ ಬಿಡುಗಡೆ ಆಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
___

Be the first to comment