ದಾಖಲೆ ಮಾಡುತ್ತಿರುವ ಜೇಮ್ಸ್ ಟಿಕೆಟ್ ಬುಕ್ಕಿಂಗ್

ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ಟಿಕೆಟ್ ಮಾರಾಟದಲ್ಲಿ ಹೊಸ ದಾಖಲೆ ಮಾಡಿದೆ. ಒಂದೇ ಚಿತ್ರ ಮಂದಿರದಲ್ಲಿ ಜೇಮ್ಸ್ ಚಿತ್ರದ 5 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

ಬೆಂಗಳೂರಿನಲ್ಲಿ ಪುನೀತ್ ರಾಜ್‌ಕುಮಾರ್ ನಿವಾಸದ ಬಳಿ ಇರುವ ‘ಕಾವೇರಿ ಸಿನಿಮಾಸ್’ ಚಿತ್ರಮಂದಿರದಲ್ಲಿ ಬೆಳಗ್ಗಿನ 4 ಗಂಟೆಯ ಪ್ರದರ್ಶನ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಟಿಕೆಟ್ ಈಗಾಗಲೇ ಮಾರಾಟ ಆಗಿದೆ. ಜನ ಮತ್ತೆ ಟಿಕೆಟ್‌ಗಾಗಿ ಮುಗಿ ಬೀಳುತ್ತಿದ್ದಾರೆ.
ಜೇಮ್ಸ್’ ಸಿನಿಮಾದ ಟಿಕೆಟ್ ನ್ನು ಆನ್‌ಲೈನ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿರುವ 5 ಗೋಪಾಲನ್ ಮಾಲ್‌ಗಳಲ್ಲಿ ಜೇಮ್ಸ್ ಸಿನಿಮಾ ಬುಕಿಂಗ್ ಮಾಡಬಹುದಾಗಿದೆ. ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಆರ್ಕೇಡ್‌, ಬನ್ನೇರುಘಟ್ಟದ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್, ಸಿರ್ಸಿ ಸರ್ಕಲ್‌ನಲ್ಲಿರುವ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಿನಿಪ್ಲೆಕ್ಸ್‌ನಲ್ಲಿ ‘ಜೇಮ್ಸ್’ ಚಿತ್ರದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಸಿಗುತ್ತಿವೆ.
ಕರ್ನಾಟಕದಲ್ಲಿಯೇ ಸುಮಾರು 400 ಸಿಂಗಲ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿ ಈಗಾಗಲೇ ಸುಮಾರು 135 ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಎರಡನೇ ಹಂತದ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಬೇಕಿದೆ.

ಸಿನಿಮಾ ಟಿಕೆಟ್ ಸಿಗುವುದು ಬಿಡುಗಡೆಯ ದಿನ ಕಷ್ಟ ಆಗಬಹುದು. ಹೀಗಾಗಿ ಮುಂಚಿತವಾಗಿಯೇ ಜನ ಟಿಕೆಟ್ ಬುಕ್ ಮಾಡಲು ಪ್ರಾರಂಭಿಸಿದ್ದಾರೆ.
ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬದಂದೇ ‘ಜೇಮ್ಸ್’ ಬಿಡುಗಡೆಯಾಗಲಿದೆ.
ಜೇಮ್ಸ್’ನಲ್ಲಿ ನಾಯಕಿಯಾಗಿ ತಮಿಳು ನಟಿ ಪ್ರಿಯಾ ಆನಂದ್ ನಟಿಸಿದ್ದಾರೆ. ‘ರಾಜಕುಮಾರ’ ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ ಹಿರಿಯ ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿ ನಿರ್ದೇಶಿಸಿದ್ದಾರೆ. ಕಿಶೋರ್ ಪತಿಕೊಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಶ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ, ದೀಪು ಎಸ್‌.ಕುಮಾರ್‌ ಸಂಕಲನ ಇದೆ.
ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣ ನಟಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!