ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಇಂದು ಚಾಲನೆ

13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಇಂದು ಚಾಲನೆ ಸಿಗಲಿದೆ.

ಇಂದಿನಿಂದ ಮಾರ್ಚ್ 10ರವರೆಗೆ ನಡೆಯುವ ಈ ಸಿನಿಮೋತ್ಸವದಲ್ಲಿ 55 ದೇಶಗಳ 200 ಚಿತ್ರಗಳು ಪ್ರದರ್ಶನ ಕಾಣಲಿವೆ. ಈ ಬಾರಿಯ ಸಿನಿಮೋತ್ಸವ ಬೆಂಗಳೂರು ನಗರದ ಮೂರು ಕಡೆ ನಡೆಯಲಿದೆ. ರಾಜಾಜಿ ನಗರದ ಓರಾಯನ್ ಮಾಲ್,- ಪಿವಿಆರ್ ಸಿನಿಮಾ,, ಚಾಮರಾಜಪೇಟೆಯ ಕಲಾವಿದರ ಸಂಘ ಹಾಗೂ ಬನಶಂಕರಿಯಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ದಿನವಿಡೀ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ವರ್ಷದ ಅಂಗವಾಗಿ ಈ ಬಾರಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಚಿತ್ರಗಳು ತೆರೆ ಕಾಣುತ್ತಿರುವುದು ವಿಶೇಷ. ಇದರ ಜೊತೆಗೆ ತುಳು ಸಿನಿಮಾ ರಂಗಕ್ಕೆ 50 ವರ್ಷವಾದ ಹಿನ್ನೆಲೆಯಲ್ಲೂ ತುಳು ಚಿತ್ರಗಳ ಕುರಿತ ಸಂವಾದ ಕಾರ್ಯಕ್ರಮ, ತುಳು ಚಿತ್ರಗಳ ಪ್ರದರ್ಶನ ಕಾಣಲಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ‘ಪಡ್ಡಾಯಿ’ ಚಿತ್ರದ ಪ್ರದರ್ಶನವೂ ಇರುತ್ತದೆ. ಜೊತೆಗೆ ಈಶಾನ್ಯ ರಾಜ್ಯಗಳ ಚಿತ್ರಗಳಿಗೂ ಈ ಬಾರಿ ಆದ್ಯತೆ ನೀಡಲಾಗಿದೆ.

1941ರಲ್ಲಿ ಬಂದ ಕನ್ನಡ ಕ್ಲಾಸಿಕ್ ‘ವಸಂತ ಸೇನೆ’ ಚಿತ್ರದ ಸ್ಕ್ರೀನಿಂಗ್ ಈ ಬಾರಿಯ ಚಲನಚಿತ್ರೋತ್ಸವದ ವಿಶೇಷ. ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆೆ ಚಾಲನೆ ನೀಡಲಿದ್ದಾರೆ.

ಮನೆಯಲ್ಲೇ ಕೂತು ಆನ್‌ಲೈನ್ ಮುಖಾಂತರ ಬೆಂಗಳೂರು ಸಿನಿಮೋತ್ಸವದ ಚಿತ್ರಗಳನ್ನು ನೋಡಬಹುದು. ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡರೆ ದಿನಕ್ಕೆ 10 ಸಿನಿಮಾ ನೋಡುವ ಅವಕಾಶ ಇದೆ. ಬೆಳಗ್ಗೆ 9ರಿಂದ ರಾತ್ರಿ ಎಷ್ಟರವರೆಗೆ ಬೇಕಿದ್ದರೂ ನೋಡಬಹುದು. ಹೆಚ್ಚು ಡಿಮ್ಯಾಂಡ್ ಇರುವ ಚಿತ್ರ 39ರಿಂದ 48 ಗಂಟೆಗಳವರೆಗೂ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಓಟಿಟಿಯಂತೆ ಇದು ಕಾರ್ಯಾಚರಿಸಲಿದ್ದು, 400 ರು. ಕೊಟ್ಟು ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು.

ವರ್ಲ್ಡ್ ಸಿನಿಮಾ, ಇಂಡಿಯನ್ ಹಾಗೂ ಏಶ್ಯನ್ ಕಾಂಪಿಟಿಷಿಯನ್ ಕೆಟಗರಿಯಲ್ಲಿ ಅನೇಕ ಉತ್ತಮ ಚಿತ್ರಗಳಿವೆ. ಟೈಲರ್ ಚಿತ್ರ ಇಂದಿನ ಉದ್ಘಾಟನಾ ಚಿತ್ರವಾಗಿ ತೆರೆ ಕಾಣಲಿದೆ. ಮುಂದಿನ ದಿನಗಳಲ್ಲೂ ಈ ಚಿತ್ರದ ಪ್ರದರ್ಶನ ಇರುತ್ತದೆ. ದಿ ನ್ಯೂಸ್ ಪೇಪರ್, ಫೈರ್, ದಿ ಎಫ್ಟೀ ನೆಸ್ಟ್, ಕನ್ನಡದ ಮಾನಾ, ಸಾರಾ ವಜ್ರ, ಮುನ್ನುಡಿ ಇತ್ಯಾದಿ ಚಿತ್ರಗಳ ಪ್ರದರ್ಶನವಿರುತ್ತದೆ. ಶಿವಾಜಿ ಸುರತ್ಕಲ್, ರುಗ್ಣ ಸೇರಿದಂತೆ ಹಲವು ಕನ್ನಡ ಚಿತ್ರಗಳ ಪ್ರದರ್ಶನವಿದೆ. ಇಂಗ್ಲೀಷ್, ಹಿಂದಿ, ಮಲಯಾಳಂ, ತಮಿಳು, ತೆಲುಗು ಸೇರಿದಂತೆ ಭಾರತೀಯ ಭಾಷೆಯ ಚಿತ್ರಗಳೂ ತೆರೆ ಕಾಣಲಿವೆ.


 

Be the first to comment

Leave a Reply

Your email address will not be published. Required fields are marked *

Translate »
error: Content is protected !!