ಚಿತ್ರ: ಭಾವಚಿತ್ರ
ನಿರ್ದೇಶಕ: ಗಿರೀಶ್ ಕುಮಾರ್ ಬಿ
ನಿರ್ಮಾಪಕರು: ಶಂಕರ್, ವಿನಾಯಕ ನಾಡಕರ್ಣಿ, ಸಚಿನ್, ರತೀಶ್ ಕುಮಾರ್.
ರೇಟಿಂಗ್: 3.5/ 5
ಕ್ಯಾಮೆರಾ ಸೆರೆ ಹಿಡಿಯುವ ಭಾವಚಿತ್ರದ ಅಂಶವನ್ನು ಇಟ್ಟುಕೊಂಡು ತಯಾರಾಗಿರುವ ಚಿತ್ರ ಭಾವಚಿತ್ರ. ಮನುಷ್ಯ ತನ್ನ ಕಣ್ಣಿನ ಮೂಲಕ ದೃಶ್ಯಗಳನ್ನು ಹೇಗೆ ಗ್ರಹಿಸುತ್ತಾನೋ ಅದೇ ರೀತಿ ಕ್ಯಾಮೆರಾ ಕೂಡ ಚಿತ್ರಗಳನ್ನ ಸೆರೆಹಿಡಿಯುತ್ತದೆ. ಈ ರೀತಿ ಸೆರೆ ಹಿಡಿದ ಚಿತ್ರಗಳ ಫ್ಲಾಶ್ ಬ್ಯಾಕ್ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಯತ್ನವನ್ನು ಭಾವಚಿತ್ರ ಮಾಡಿದೆ.
ಅಂಗಡಿಗೆ ತನ್ನ ಕ್ಯಾಮೆರಾ ರಿಪೇರಿ ಕೊಟ್ಟದ್ದನ್ನು ಪಡೆಯಲು ಬರುವ ನಾಯಕ ವಿಷ್ಣು(ಚಕ್ರವರ್ತಿ), ಪ್ರೀತಿ ಸಿಗದಿದ್ದಾಗ ಬೇಸರದಿಂದ ತನ್ನ ಕ್ಯಾಮೆರಾ ಜೊತೆಗೆ ಬೈಕ್ ನಲ್ಲಿ ದೂರ ಪ್ರಯಾಣ ಮಾಡುತ್ತಾನೆ. ಈ ವೇಳೆ ಕೆಲವು ಘಟನೆಗಳು ತನ್ನ ಫ್ಲ್ಯಾಷ್ ಬ್ಯಾಕ್ ನೆನಪಿಸುತ್ತಾ ಹೋಗುತ್ತದೆ.
ತನ್ನ ತಂಗಿಗೆ ಮ್ಯಾಟ್ರಿಮೊನಿ ಮೂಲಕ ಗಂಡು ಹುಡುಕುವ ವಿಷ್ಣುವಿಗೆ ಮದುವೆ ಆಗಿಲ್ಲ ಎನ್ನುವುದನ್ನು ಅರಿತ ಮ್ಯಾಟ್ರಿಮೋನಿಯವರು ಸೂಕ್ತ ಹುಡುಗಿ ಇದ್ದಾಳೆಂದು ಅವಳ ವಿವರ ನೀಡುತ್ತಾರೆ. ಬಳಿಕ ವಿಷ್ಣುವನ್ನು ಭೇಟಿಮಾಡುವ ನಾಯಕಿ ಚಿತ್ರ (ಗಾನವಿ ಲಕ್ಷ್ಮಣ್) ಮೂಲಕ ಪ್ರೇಮ ಪ್ರಸಂಗಗಳು ಸಾಗುತ್ತವೆ. ಮುಂದೆ ಇಬ್ಬರಿಗೂ ಮನಸ್ತಾಪವೂ ಆಗುತ್ತದೆ.
ಮುಂದೆ ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕುವ ದೃಶ್ಯ ಚಿತ್ರದ ಓಟಕ್ಕೆ ಹೊಸ ತಿರುವನ್ನು ನೀಡುತ್ತದೆ. ಫ್ಲ್ಯಾಶ್ ಬ್ಯಾಕ್ ನಲ್ಲಿ ಮತ್ತೊಂದು ಕಥೆ ತೆರೆದುಕೊಳ್ಳುತ್ತದೆ. ಪುರಾತನ ದೇವಸ್ಥಾನದ ದೇವರ ಅಭಿಷೇಕಕ್ಕೆ ಪ್ರತಿನಿತ್ಯ ಹಾಲನ್ನು ನೀಡುವ ಮತ್ತೊಬ್ಬ ನಾಯಕ ಶಂಕರ್ (ಗಿರೀಶ್ ಕುಮಾರ್) ಆ ಊರಿನ ಗೌಡ ಬಾಲ(ಗಿರೀಶ್ ಬಿಜ್ಜಳ್). ಇವರಿಬ್ಬರ ಗೆಳೆತನ ಮಾದರಿ ಆದದ್ದು.
ಪುರಾತತ್ವ ದೇವಾಲಯಗಳ ಸಂಶೋಧನೆ ಕಾರ್ಯ ನಿಮಿತ್ತ ಊರಿಗೆ ಬರುವ ನಾಯಕಿ.ಊರ ಗೌಡನ ಮಾರ್ಗದರ್ಶನದಂತೆ ನಾಯಕಿಗೆ ಸಹಕಾರ ಮಾಡುವ ಶಂಕರ. ಮುಂದೆ ಇವರ ನಡುವೆ ಪ್ರೇಮಾಂಕುರ ಆಗುತ್ತದೆ.
ಅದೇ ಊರಿನ ಹೊಳೆದಂಡೆ ಗ್ಯಾಂಗ್ ನ ದರೋಡೆ, ಕಳ್ಳತನ ಪೊಲೀಸರಿಗೆ ದೊಡ್ಡ ತಲೆ ನೋವು ಆಗಿರುತ್ತದೆ. ವಿಷ್ಣು ದೇವರ ಉತ್ಸವ ಮೂರ್ತಿಯ ಕಳ್ಳತನ ಪ್ರಯತ್ನ, ಒಂದಷ್ಟು ಹೊಡೆದಾಟ, ಬಡಿದಾಟದ ಮೂಲಕ ಚಿತ್ರ ಮುಂದೆ ಸಾಗುತ್ತದೆ.
ನಾಯಕನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು? ನಾಯಕ, ನಾಯಕಿಯನ್ನು ಮದುವೆ ಆಗುತ್ತನಾ ಈ ಪ್ರಶ್ನೆಗಳಿಗೆ ಸಿನಿಮಾವನ್ನೇ ನೋಡಬೇಕು.
ನಾಯಕ ಪಾತ್ರ ಮಾಡಿರುವ ಚಕ್ರವರ್ತಿ ರೆಡ್ಡಿ ಹ್ಯಾಂಡ್ ಸಮ್ ಆಗಿದ್ದು, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿ ಪಾತ್ರ ಮಾಡಿರುವ ಗಾನವಿ ಲಕ್ಷ್ಮಣ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು, ಮುದ್ದಾಗಿ ತೆರೆಮೇಲೆ ಗಮನ ಸೆಳೆಯುವಂತೆ ಕಾಣಿಸಿಕೊಂಡಿದ್ದಾರೆ. ಗಾನವಿ ಡ್ರೆಸ್, ಹೇರ್ ಸ್ಟೈಲ್ ಮೂಲಕ ಗಮನ ಸೆಳೆಯುತ್ತಾರೆ. ಚಿತ್ರದ ನಿರ್ದೇಶಕ ಗಿರೀಶ್ ಕುಮಾರ್ ಕೂಡ ಹಳ್ಳಿ ಹೈದನಾಗಿ ಪಾತ್ರ ಮಾಡಿದ್ದಾರೆ.
ಗಿರೀಶ್ ಬಿಜ್ಜಳ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದ ಆರಂಭದಲ್ಲಿ ಬರುವ ಅವಿನಾಶ್ ಕ್ಯಾಮೆರಾದ ಮಹತ್ವದ ಜೊತೆಗೆ ಅದರ ಕಾರ್ಯವೈಖರಿಯ ಬಗ್ಗೆ ವಿವರಣೆ ನೀಡಿ ಗಮನ ಸೆಳೆಯುತ್ತಾರೆ. ಒಟ್ಟಾಗಿ ಸ್ನೇಹಿತರು ಸೇರಿ ನಿರ್ಮಿಸಿರುವ ಚಿತ್ರ ಗಮನ ಸೆಳೆಯುತ್ತದೆ.
ನಿರ್ದೇಶಕ ಗಿರೀಶ್ ಕುಮಾರ್.ಬಿ ಆಯ್ಕೆ ಮಾಡಿಕೊಂಡಿರುವ ಕಥಾಹಂದರ ವಿಭಿನ್ನ, ವಿಶೇಷವಾಗಿದೆ. ಗೌತಮ್ ಶ್ರೀವತ್ಸ ಅವರ ಸಂಗೀತ ಮನ ಮುಟ್ಟುತ್ತದೆ. ಹಿನ್ನೆಲೆ ಸಂಗೀತ ಚಿತ್ರದ ದೃಶ್ಯಗಳಿಗೆ ಜೀವ ತುಂಬಿದೆ. ಈ ವರ್ಷದಲ್ಲಿ ಬಿಡುಗಡೆ ಆದ ಭಿನ್ನ ಚಿತ್ರದ ಸಾಲಿಗೆ “ಭಾವಚಿತ್ರ” ಸೇರಿಕೊಂಡಿದೆ.
Be the first to comment