ಮೈಸೂರು ರಸ್ತೆಯ ನಾಯಂಡ ಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ ‘ಪುನೀತ್ ರಾಜ್ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಬೆಂಗಳೂರು ಮಹಾನಗರ ಪಾಲಿಕೆ ಸಮ್ಮತಿಸಿದೆ.
12 ಕಿ.ಮೀ ಉದ್ದದ ರಸ್ತೆಯ ನಕ್ಷೆಯನ್ನು ತಯಾರಿಸಿ ಈ ವ್ಯಾಪ್ತಿಯ ಸಾರ್ವಜನಿಕರಿಂದ ಆಕ್ಷೇಪಣೆಗಳ ಮಹಜರ್ ನಡೆಸಲಾಗಿತ್ತು. 700 ಕ್ಕೂ ಹೆಚ್ಚು ಮಂದಿ ಈ ರಸ್ತೆಗೆ ಅಪ್ಪು ಅವರ ಹೆಸರಿಡುವ ಪರವಾಗಿ ಸಹಿ ಮಾಡಿದ್ದರು. ಯಾರೊಬ್ಬರೂ ವಿರುದ್ಧವಾಗಿ ಸಹಿ ಮಾಡಿರಲಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರ ಟಿಪ್ಪಣಿಯಂತೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ ‘ಪುನೀತ್ ರಾಜ್ಕುಮಾರ್ ರಸ್ತೆ’ ಎಂದು ನಾಮಕಾರಣ ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಅಧಿಕೃತ ಅನುಮೋದನೆ ನೀಡಿದ್ದಾರೆ.
ಈ ಹಿಂದೆ ಗೊರಗುಂಟೆ ಪಾಳ್ಯದಿಂದ ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರ ಸಮಾಧಿಗಳು ಇರುವ ರಸ್ತೆಯಿಂದ ಮೈಸೂರು ರಸ್ತೆಯ ನಾಯಂಡ ಹಳ್ಳಿ ಜಂಕ್ಷನ್ ವರೆಗಿನ ವರ್ತುಲ ರಸ್ತೆಗೆ 2015 ರಲ್ಲಿ ‘ಡಾ. ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ’ ಎಂದು ಬಿಬಿಎಂಪಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡು ರಸ್ತೆಯ ನಾಮಕರಣ ಸಮಾರಂಭವನ್ನು ಆಯೋಜನೆ ಮಾಡಲಾಗಿತ್ತು.
ಈಗ ಇದರ ಮುಂದುವರೆದ ಭಾಗವಾಗಿ ನಾಯಂಡ ಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ವರೆಗಿನ ವರ್ತುಲ ರಸ್ತೆಗೆ ‘ಪುನೀತ್ ರಾಜ್ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿಗಳಿಂದ ‘ಪುನೀತ್ ರಾಜ್ಕುಮಾರ್ ರಸ್ತೆ’ಯ ನಾಮಕರಣ ಸಮಾರಂಭವನ್ನು ಡಾ. ರಾಜ್‌ಕುಮಾರ್ ಕುಟುಂಬದ ಎಲ್ಲಾ ಸದಸ್ಯರ ಹಾಜರಾತಿಯಲ್ಲಿ ಏರ್ಪಡಿಸಲಾಗುವುದು ಎಂದು ಬಿಬಿಎಂಪಿ ಸದಸ್ಯ, ಬಿಜೆಪಿ ಮುಖಂಡ ಎಂಆರ್ ರಮೇಶ್ ಮಾಹಿತಿ ನೀಡಿದ್ದಾರೆ.
ರಾಜ್‌ಕುಮಾರ್ ಅವರ ಹೆಸರಿಟ್ಟಿರುವ ರಸ್ತೆಯ ಮುಂದುವರೆದ ರಸ್ತೆಗೆ ಪುನೀತ್ ರಾಜ್ಕುಮಾರ್ ಅವರ ಹೆಸರಿಟ್ಟಿರುವುದು ವಿಶೇಷ ಆಗಿದೆ.
___
Be the first to comment