ಜೇಮ್ಸ್ ಟೀಸರ್ ಗೆ ಪ್ರಭಾಸ್ ಮೆಚ್ಚುಗೆ

ಟಾಲಿವುಡ್​ ಸ್ಟಾರ್​ ಪ್ರಭಾಸ್ ಅವರು ‘ಜೇಮ್ಸ್’​ ಚಿತ್ರದ ಟೀಸರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಜೇಮ್ಸ್ ಸಿನಿಮಾ ಮಾಸ್ಟರ್‌ಪೀಸ್​ ಸಿನಿಮಾವಾಗುತ್ತದೆ ಎನ್ನುವುದನ್ನು ನಾನು ಖಾತ್ರಿ ಪಡಿಸುತ್ತೇನೆ. ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರನ್ನು ಇಷ್ಟಪಡುವ ಲಕ್ಷಾಂತರ ಜನರಿಗೆ ಈ ಸಿನಿಮಾ ವಿಶೇಷವಾಗಿರುತ್ತದೆ” ಎಂದು ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರವಾದ ಜೇಮ್ಸ್ ನಲ್ಲಿ ಮೊದಲ ಬಾರಿಗೆ ಸೈನಿಕ ಪಾತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಮಿಂಚಿದ್ದಾರೆ. ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ಸಹ ನಟಿಸಿದ್ದಾರೆ. ಚಿತ್ರವನ್ನು ಅಪ್ಪು ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬಿಡುಗಡೆಯಾಗಿರುವ ಟೀಸರ್​ ಸಿನಿಮಾದ ಮೇಲಿರುವ ನಿರೀಕ್ಷೆ ಹೆಚ್ಚಿಸಿದೆ.

ಜೇಮ್ಸ್​ ಟೀಸರ್​ ಆಕ್ಷನ್ ನಿಂದ ಕೂಡಿದ್ದು, ಶಿವಣ್ಣ ಅವರು ಅಪ್ಪು ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಚಿತ್ರದ ಟೀಸರ್ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತ್ರವಲ್ಲದೇ ಕರ್ನಾಟದಲ್ಲಿರುವ ಎಲ್ಲಾ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನವಾಗುತ್ತಿದೆ.
ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಸೈನಿಕ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.
ಜೇಮ್ಸ್’​ನಲ್ಲಿ ನಾಯಕಿಯಾಗಿ ತಮಿಳು ನಟಿ ಪ್ರಿಯಾ ಆನಂದ್ ನಟಿಸಿದ್ದಾರೆ. ‘ರಾಜಕುಮಾರ’ ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ ಹಿರಿಯ ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿ ನಿರ್ದೇಶಿಸಿದ್ದಾರೆ. ಕಿಶೋರ್ ಪತಿಕೊಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಶ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ, ದೀಪು ಎಸ್‌.ಕುಮಾರ್‌ ಸಂಕಲನ ಇದೆ.
ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣ ನಟಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!