ಚಿತ್ರ: ಫೋರ್ ವಾಲ್ಸ್ ಆ್ಯಂಡ್ ಟೂ ನೈಟೀಸ್ (ಕನ್ನಡ)
ಕಥೆ, ನಿರ್ದೇಶನ: ಸಂಗಮೇಶ ಎಸ್. ಸಜ್ಜನರ
ನಿರ್ಮಾಪಕ: ಟಿ.ವಿಶ್ವನಾಥ್ ನಾಯ್ಕ್
ತಾರಾಗಣ: ಅಚ್ಯುತ್ ಕುಮಾರ್, ದತ್ತಣ್ಣ, ಡಾ.ಪವಿತ್ರ ಇತರರು.
ರೇಟಿಂಗ್: 3.5/5
‘ಫೋರ್ ವಾಲ್ಸ್ ಆ್ಯಂಡ್ ಟೂ ನೈಟೀಸ್’ ಸಿನಿಮಾದ ಶೀರ್ಷಿಕೆ ವಿಶೇಷ ಅನಿಸಿದರೂ ಇದು ಕೌಟುಂಬಿಕ ಕಥಾ ವಸ್ತು ಹೊಂದಿದ ಸಿನಿಮಾ. ಸಂಸಾರದ ಕಷ್ಟ, ಸುಖದ ನಡುವೆ ಸಾಗುವ ಕಥೆಗೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಚ್ಚುತ ಕುಮಾರ್ ಜೀವ ತುಂಬಿದ್ದಾರೆ.
ಫ್ಲ್ಯಾಶ್‌ಬ್ಯಾಕ್‌ನಿಂದ ಚಿತ್ರದ ಕಥೆ ಆರಂಭ ಆಗುತ್ತದೆ. ಸರ್ಕಾರಿ ನೌಕರಿಯಲ್ಲಿ ಇರುವ ಶಂಕರ(ಅಚ್ಯುತ್ ಕುಮಾರ್) ರೆಟ್ರೊ ಕಾಲದ ಯುವಕ ಆಗಿ ಕಾಣಿಸಿಕೊಳ್ಳುತ್ತಾರೆ. ತಂದೆ–ತಾಯಿ ಇಲ್ಲದೇ ಬೆಳೆದ ಶಂಕರನಿಗೆ ಮಾಮ(ದತ್ತಣ್ಣ) ಪಾಲಕ. ಶಂಕರನಿಗೆ ಎಂಥಾ ಹುಡುಗಿಯರನ್ನು ಮಾಮ ಮದುವೆಗೆ ತೋರಿಸಿದರೂ, ಶಂಕರನಿಗೆ ಎದುರುಮನೆ ಪಾರ್ವತಿ(ಡಾ.ಪವಿತ್ರ) ಮೇಲೆ ಅನುರಾಗ. ಕೊನೆಗೂ ಪಾರ್ವತಿಯನ್ನು ಮದುವೆಯಾಗುವ ಶಂಕರನಿಗೆ ಗಂಡು ಮಕ್ಕಳ ಆಸೆ. ಆದರೆ ಮೊದಲು ಎರಡು ಹೆಣ್ಣುಮಕ್ಕಳಾದಾಗ ಅವನಿಗೆ ದೇವರ ಮೇಲೆ ಭಯಂಕರ ಕೋಪ. ಮೂರನೇಯದು ಗಂಡು ಮಗು, ಜೊತೆಗೆ ಮತ್ತೊಂದು ಹೆಣ್ಣು ಮಗುಹೆತ್ತ ಪಾರ್ವತಿ ಕೊನೆಯುಸಿರೆಳೆಯುತ್ತಾಳೆ.
ತಾಯಿ ಇಲ್ಲದ ಮಕ್ಕಳನ್ನು ಶಂಕರ ಪ್ರೀತಿಯಿಂದ ಬೆಳೆಸುತ್ತಾನೆ. ಡಿಗ್ರಿ ಮುಗಿದ ಕೂಡಲೇ ಮೂರು ಹೆಣ್ಣು ಮಕ್ಕಳಿಗೆ ಎರಡು ನೈಟಿ ಕೊಡಿಸಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇಡುತ್ತಾನೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಡದೇ ಇರುವುದು ಮಗನಿಗೆ ಕೋಪ ತರಿಸುತ್ತದೆ. ನಿರುದ್ಯೋಗ, ಮದುವೆ ಆಗದೆ ಮನೆಯಲ್ಲಿರುವ ಹೆಣ್ಣುಮಕ್ಕಳು, ಅಪ್ಪನ ಬಗ್ಗೆ ಬೇರೆಯವರ ಚುಚ್ಚುಮಾತುಗಳನ್ನು ಕೇಳಿದ ಮಗ ಅಪ್ಪನನ್ನು ಕೊಂದು ಅವನ ಸರ್ಕಾರಿ ಕೆಲಸ ತನ್ನದಾಗಿಸಿಕೊಳ್ಳಲು ತಂತ್ರ ಹೂಡುತ್ತಾನೆ. ಅಪ್ಪನನ್ನು ಮಗ ಕೊಲ್ಲುತ್ತಾನಾ? ಹೆಣ್ಣು ಮಕ್ಕಳಿಗೆ ಶಂಕರ ಏಕೆ ಮದುವೆ ಮಾಡಿಸಿಲ್ಲ ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾ ನೋಡಬೇಕು.
ಅಚ್ಯುತ್, ದತ್ತಣ್ಣ ಚಿತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಮಗ ಸೂರ್ಯನ ಪಾತ್ರದಲ್ಲಿ ಭಾಸ್ಕರ್ ನೀನಾಸಂ ಅವರ ನಟನೆ ಚೆನ್ನಾಗಿದೆ. ಹೆಣ್ಣು ಮಕ್ಕಳಾಗಿ ಡಾ.ಜಾನ್ವಿ, ಅಂಚಲ್, ಶ್ರೇಯಾ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿ.ದೇವೇಂದ್ರ ರೆಡ್ಡಿ ಅವರ ಕ್ಯಾಮೆರಾ ಕೆಲಸ ನೋಡುಗರಿಗೆ ಖುಷಿ ನೀಡುತ್ತದೆ.
ನಾಲ್ಕು ಗೋಡೆಯ ನಡುವೆ ನಡೆಯುವ ಕಥೆಗೆ ಕೊನೆಯಲ್ಲಿ ಚುರುಕು ಮುಟ್ಟಿಸಿದ್ದರೆ ಸಿನಿಮಾ ನೋಡುಗರನ್ನು ಇನ್ನಷ್ಟು ಹಿಡಿದಿಡುವಲ್ಲಿ ಸಫಲ ಆಗುತ್ತಿತ್ತು. ಸಿನಿಮಾ ಉತ್ತಮವಾಗಿ ಮೂಡಿ ಬರಲು ಕಲಾವಿದರೆಲ್ಲ ಶ್ರಮಿಸಿರುವುದು ಧನಾತ್ಮಕ ಅಂಶ.
-ಭೀಮರಾಯ
Be the first to comment